ಉಚಿತ ಕಾನೂನು ನೆರವು ಮೂಲಭೂತ ಹಕ್ಕಾಗಿದೆ : ಸುಪ್ರೀಂ ಕೋರ್ಟ್

Update: 2024-10-23 15:24 GMT

 ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ : ಸಂವಿಧಾನದ ವಿಧಿ 21ರ ಅನ್ವಯ ಕೈದಿಗೆ ವಕೀಲರನ್ನು ಒದಗಿಸುವುದು ಮೂಲಭೂತ ಹಕ್ಕಾಗಿದ್ದು, ಬಡವರಿಗೆ ಒದಗಿಸುವ ಕಾನೂನು ನೆರವು ಕಳಪೆ ಕಾನೂನು ನೆರವಾಗಿರಬಾರದು ಎಂದು ಬುಧವಾರ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ಒಂದು ವೇಳೆ ಬಡವರು ಮತ್ತು ನಿರ್ಗತಿಕರು ಖುದ್ದಾಗಿ ಕಾನೂನು ನೆರವನ್ನು ಕೋರದಿದ್ದರೂ, ಸಂವಿಧಾನದ ವಿಧಿ 21ರ ಅನ್ವಯ ಅಂಥವರಿಗೆ ಸರಕಾರದ ವೆಚ್ಚದಲ್ಲಿ ಉಚಿತ ಕಾನೂನು ನೆರವು ಒದಗಿಸುವುದು ವ್ಯಕ್ತಿಯೊಬ್ಬನ ಮೂಲಭೂತ ಹಕ್ಕಾಗಿದೆ ಎಂದು ನ್ಯಾ. ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

ಹೋರಾಟಗಾರ ಸುಹಾಸ್ ಚಕ್ಮ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, ವಿಚಾರಣಾಧೀನ ಕೈದಿಗಳು ಅಥವಾ ಅಪರಾಧಿಗಳು ಕಾನೂನು ಸೇವಾ ಪ್ರಾಧಿಕಾರಗಳ ಕಾಯ್ದೆ, 1987ರ ಅಡಿ ಉಚಿತ ಕಾನೂನು ನೆರವು ಪಡೆಯುವುದನ್ನು ಮತ್ತಷ್ಟು ಸಬಲಗೊಳಿಸಲು ತನ್ನ ತೀರ್ಪಿನಲ್ಲಿ ಸರಣಿ ನಿರ್ದೇಶನಗಳನ್ನು ನೀಡಿತು.

“ಈ ಕುರಿತಂತೆ ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರಗಳು ಪ್ರಾಯೋಜಿಸುವ ಫಲಾನುಭವಿ ಯೋಜನೆಗಳು ದೇಶದ ಪ್ರತಿ ಮೂಲೆಯನ್ನೂ ತಲುಪುವಂತೆ ಮಾಡಬೇಕು. ನಿರ್ದಿಷ್ಟವಾಗಿ ಅದು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸಬೇಕು” ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News