ಹೀರಾ ಗೋಲ್ಡ್ MD ನೌಹೇರಾ ಶೇಖ್ ಗೆ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

Update: 2024-10-19 06:22 GMT

Photo : instagram.com/drnowherashaik_official

ಹೊಸದಿಲ್ಲಿ : ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಹೀರಾ ಗೋಲ್ಡ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಖ್ ಅವರಿಗೆ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

ನ್ಯಾಯಾಲಯವು ಪದೇ ಪದೇ ಅವಕಾಶಗಳನ್ನು ನೀಡಿದ್ದರೂ ಹೂಡಿಕೆದಾರರ ಬಾಕಿ ಇತ್ಯರ್ಥಗೊಳಿಸಲು 580 ಕೋಟಿ ರೂ. ಕ್ರೋಡಿಕರಣಕ್ಕೆ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೌಹೇರಾ ಶೇಖ್ ಅವರಿಗೆ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದೆ.

ನ್ಯಾಯಾಲಯವು ನೌಹೇರಾ ಶೇಖ್ ಗೆ 2 ವಾರಗಳೊಳಗೆ ಶರಣಾಗುವಂತೆ ಆದೇಶಿಸಿದೆ ಮತ್ತು ಶೇಖ್ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್ ಐ ಆರ್ ಗಳನ್ನು ಕಾನೂನಿನ ಪ್ರಕಾರ ಮುಂದುವರಿಸಲು ಸೂಚಿಸಿದೆ.

ಹೀರಾ ಗೋಲ್ಡ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ಹೂಡಿಕೆ ಮಾಡಿದ ಮೊತ್ತದ ಮೇಲೆ 36% ಲಾಭಾಂಶ ನೀಡುವ ಭರವಸೆಯೊಂದಿಗೆ ಸಾರ್ವಜನಿಕರಿಂದ ಭಾರಿ ಠೇವಣಿಗಳನ್ನು ಸಂಗ್ರಹಿಸಿದೆ. ಆದರೆ ಕಂಪನಿಯು ಲಾಭಾಂಶ ಮತ್ತು ಮೆಚ್ಯೂರಿಟಿ ಮೊತ್ತವನ್ನು ಪಾವತಿಸಲು ವಿಫಲವಾದ ಹಿನ್ನೆಲೆ ಹೂಡಿಕೆದಾರರು ವಂಚನೆ ಪ್ರಕರಣವನ್ನು ದಾಖಲಿಸಿದ್ದರು.

ನೌಹೇರಾ ಶೇಖ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಬಂಧಿಸಲಾಗಿತ್ತು. ಹೂಡಿಕೆದಾರರಿಗೆ ಹಣ ಹಿಂದಿರುಗಿಸಿ, ಇತ್ಯರ್ಥಪಡಿಸಬೇಕೆಂಬ ಷರತ್ತಿನ ಮೇಲೆ ನೌಹೇರಾ ಶೇಖ್ ಗೆ 2021ರ ಜ. 21ರಂದು ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದಾದ ಬಳಿಕ ಹಲವು ಬಾರಿ ಕೋರ್ಟ್ ಮಧ್ಯಂತರ ಜಾಮೀನನ್ನು ವಿಸ್ತರಿಸಿತ್ತು.

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ನೌಹೇರಾ ಶೇಖ್ ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಗಮನಿಸಿ ಜಾಮೀನನ್ನು ರದ್ದುಗೊಳಿಸಿದೆ. ಇದಲ್ಲದೆ ಆರೋಪಿಗೆ ಶರಣಾಗಲು 2 ವಾರಗಳ ಕಾಲಾವಕಾಶವನ್ನು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News