ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಸುಲಿಗೆ ಮಾಡಿ ಬಂಧನಕ್ಕೊಳಗಾಗಿದ್ದ ಮಾಜಿ ರಾ ಅಧಿಕಾರಿ ವಿಕಾಸ್ ಯಾದವ್!

Update: 2024-10-19 06:56 GMT

ಹೊಸದಿಲ್ಲಿ : ಖಾಲಿಸ್ತಾನಿ ಉಗ್ರಗಾಮಿ ಹಾಗೂ ಅಮೆರಿಕ ಪ್ರಜೆ ಗುರ್ ಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆ ಪ್ರಯತ್ನದ ಆರೋಪಿಯಾಗಿರುವ ಮಾಜಿ ರಾ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಅಮೆರಿಕ ತನಿಖಾ ಸಂಸ್ಥೆ ಎಫ್ಬಿಐ ವಾಂಟೆಡ್ ಪೋಸ್ಟರ್ ಬಿಡುಗಡೆ ಮಾಡಿರುವ ಬೆನ್ನಿಗೇ, ಒಂದು ವರ್ಷದ ಹಿಂದೆ ವ್ಯಕ್ತಿಯೊಬ್ಬರನ್ನು ಬೆದರಿಸಿ, ಸುಲಿಗೆ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಆಕಾಶ್ ಯಾದವ್, ಕೆಲ ತಿಂಗಳ ನಂತರ ಜೈಲಿನಿಂದ ಬಿಡುಗಡೆಗೊಂಡಿದ್ದರು ಎಂಬ ಸಂಗತಿ ಬಹಿರಂಗಗೊಂಡಿದೆ.

ಸುಲಿಗೆ ಆರೋಪ ಪ್ರಕರಣದ ತನಿಖೆಯ ಪ್ರಕಾರ, ಯಾದವ್, ದೂರುದಾರ ರಾಜ್ ಕುಮಾರ್ ವಾಲಿಯ ಎಂಬ ವ್ಯಕ್ತಿಯನ್ನು ಅಂಡರ್ ಕವರ್ ಏಜೆಂಟ್ ಎಂದು ಪರಿಚಯಿಸಿಕೊಂಡು ಭೇಟಿಯಾಗಿದ್ದರು ಎನ್ನಲಾಗಿದೆ. ರಾಷ್ಟ್ರೀಯ ತನಿಖಾ ದಳಕ್ಕಾಗಿ ಕೆಲಸ ಮಾಡುತ್ತಿರುವ ಸರಕಾರಿ ಅಧಿಕಾರಿ ಎಂಬ ಸೋಗು ಹಾಕಿಕೊಂಡು, ವಾಲಿಯ ಅವರನ್ನು ಅಪಹರಿಸಿ, ಅವರ ಸುಲಿಗೆ ಮಾಡುವುದಕ್ಕೂ ಮುನ್ನ, ಅವರನ್ನು ರಾಷ್ಟ್ರೀಯ ತನಿಖಾ ದಳದ ಕಚೇರಿಯ ಮುಂದೆ ಭೇಟಿಯಾಗಿದ್ದರು ಎಂದು ಪ್ರಾಥಮಿಕ ಮಾಹಿತಿ ವರದಿಯಲ್ಲಿ ಆರೋಪಿಸಲಾಗಿದೆ.

ವಿಕಾಸ್ ಯಾದವ್ ವಾಂಟೆಡ್ ಆರೋಪಿ ಎಂಬ ಸಂಗತಿ ತದನಂತರ ಪೊಲೀಸರಿಗೆ ಮಾಧ್ಯಮಗಳ ವರದಿಯ ಮೂಲಕ ಅರಿವಿಗೆ ಬಂದಿದೆ. ವಿಕಾಸ್ ಯಾದವ್, ವಾಲಿಯರನ್ನು ತಮ್ಮಿಬ್ಬರ ಸಾಮಾನ್ಯ ಸ್ನೇಹಿತರ ಮೂಲಕ ಕಳೆದ ವರ್ಷ ಔತಣ ಕೂಟವೊಂದರಲ್ಲಿ ಭೇಟಿಯಾಗಿದ್ದರು ಎನ್ನಲಾಗಿದೆ.

FIR ನಲ್ಲೇನಿದೆ?

FIR ಪ್ರಕಾರ, ರೋಹಿಣಿ ನಿವಾಸಿಯಾದ ಹಾಗೂ ದಿಲ್ಲಿಯ ಮೋತಿನಗರದಲ್ಲಿ ಕೆಫೆ ಮತ್ತು ಲಾಂಜ್ ಅನ್ನು ನಡೆಸುತ್ತಿರುವ ವಾಲಿಯರನ್ನು ಯಾದವ್ ಭೇಟಿಯಾಗಿದ್ದರು. ನಿಮಗೆ ಗಂಭೀರ ಬೆದರಿಕೆ ಇದೆ ಎಂದು ವಾಲಿಯಗೆ ಹೇಳಿದ್ದ ಯಾದವ್, ಡಿಸೆಂಬರ್ 11, 2023ರಂದು ತನ್ನನ್ನು ರಾಷ್ಟ್ರೀಯ ತನಿಖಾ ದಳದ ಕಚೇರಿ ಎದುರು ಭೇಟಿಯಾಗುವಂತೆ ಸೂಚಿಸಿದ್ದರು. ಈ ಸಂದರ್ಭದಲ್ಲಿ ಅವರ ಸಹಾಯಕ ಅಬ್ದುಲ್ಲಾ ಎಂಬ ವ್ಯಕ್ತಿಯೂ ಇದ್ದರು ಎಂದು ಹೇಳಲಾಗಿದೆ.

“ದೂರುದಾರ ವಾಲಿಯ ತಮ್ಮ ಸ್ನೇಹಿತ ಅಭಿಜಿತ್ ಎಂಬುವವರೊಂದಿಗೆ ವಿಕಾಸ್ ಯಾದವ್ ರನ್ನು ಭೇಟಿಯಾಗಲು ತೆರಳಿದ್ದರು. ಈ ಸಂದರ್ಭದಲ್ಲಿ ವಿಕಾಸ್ ಯಾದವ್, ಆರೋಪಿ ಅಬ್ದುಲ್ಲಾರೊಂದಿಗೆ ಕುಳಿತಿದ್ದರು. ಇದಾದ ನಂತರ, ಅಬ್ದುಲ್ಲಾ, ವಾಲಿಯರನ್ನು ಕಾರಿಗೆ ನೂಕಿದ. ದೂರದಾರನಿಗೆ ಕಿರುಕುಳ ನೀಡಿ, ಹಲ್ಲೆ ನಡೆಸಿದ ಆರೋಪಿಗಳು, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟರು” ಎಂದು ನ್ಯಾಯಾಲಯವೊಂದರ ಆದೇಶವನ್ನು ಉಲ್ಲೇಖಿಸಿ, FIR ನಲ್ಲಿ ಹೇಳಲಾಗಿದೆ.

“ಆರೋಪಿಗಳು ವಾಲಿಯರನ್ನು ಥಳಿಸಿದರು, ಚುಚ್ಚುಮದ್ದು ಚುಚ್ಚಿದರು ಹಾಗೂ ಅವರ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದರು. ಅವರು ದೂರುದಾರರ ಕೆಫೆಯ ಬ್ಯಾಂಕ್ ಚೆಕ್ ಅನ್ನು ಕಿತ್ತುಕೊಂಡು, ಅವರಿಂದ ಬಲವಂತವಾಗಿ ಖಾಲಿ ಚೆಕ್ ಗಳ ಮೇಲೆ ಸಹಿ ಪಡೆದರು. ಇದಾದ ನಂತರ, ಘಟನೆಯ ಕುರಿತು ಬಾಯಿ ಬಿಡಬಾರದು ಎಂದು ಬೆದರಿಕೆ ಒಡ್ಡಿ, ಅವರನ್ನು ಅವರ ಕಾರಿನ ಬಳಿ ಬಿಟ್ಟರು” ಎಂದೂ ಪ್ರಾಥಮಿಕ ಮಾಹಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಲಿಯ ಕೆಫೆಗೆ ಮರಳಿದ ನಂತರ, ಆರೋಪಿಗಳು ಕೆಫೆಯಲ್ಲಿಟ್ಟಿದ್ದ ರೂ. 50,000 ನಗದನ್ನೂ ಕೊಂಡೊಯ್ದಿರುವುದಲ್ಲದೆ, ಸಿಸಿಟಿವಿಯ ಎಲ್ಲ ದೃಶ್ಯಾವಳಿಗಳನ್ನೂ ಅಳಿಸಿ ಹಾಕಿರುವುದನ್ನು ಪತ್ತೆ ಹಚ್ಚಿದ್ದಾರೆ ಎಂದೂ ಹೇಳಲಾಗಿದೆ.

ಈ ಸಂಬಂಧ ವಿಕಾಸ್ ಯಾದವ್ ರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ, ನನ್ನ ತಂದೆ ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ ನಿರ್ವಹಿಸಿದ್ದರು ಹಾಗೂ ನನಗೆ 2015ರಲ್ಲಿ ವಿವಾಹವಾಗಿತ್ತು ಎಂಬ ಸಂಗತಿಯನ್ನು ಅವರು ಬಾಯಿ ಬಿಟ್ಟಿದ್ದಾರೆ.

ಅಮೆರಿಕ ದೋಷಾರೋಪ ಪಟ್ಟಿಯ ಪ್ರಕಾರ, ಯಾದವ್ ಗೆ ವಿಕಾಸ್ ಹಾಗೂ ಅಮಾನತ್ ಎಂಬ ಅಡ್ಡ ಹೆಸರುಗಳೂ ಇವೆ. ಈ ದೋಷಾರೋಪ ಪಟ್ಟಿ ದಾಖಲಾದ ಸಂದರ್ಭದಲ್ಲಿ ಅವರನ್ನು ಭಾರತ ಸರಕಾರದ ಸಂಪುಟ ಕಾರ್ಯಾಲಯ ಉದ್ಯೋಗಕ್ಕೆ ನೇಮಿಸಿಕೊಂಡಿದ್ದು, ಈ ಕಾರ್ಯಾಲಯವು ವಿದೇಶಿ ಗುಪ್ತಚರ ಸೇವೆಯಾದ RAW ವನ್ನು ನಿರ್ವಹಿಸುತ್ತದೆ ಎಂಬ ಸಂಗತಿ ತಿಳಿದು ಬಂದಿದೆ. ವಿಕಾಸ್ ಯಾದವ್ ತಮ್ಮನ್ನು ಹಿರಿಯ ಕ್ಷೇತ್ರಾಧಿಕಾರಿ ಎಂದು ಹೇಳಿಕೊಂಡಿದ್ದು, ಭದ್ರತಾ ನಿರ್ವಹಣೆ ಹಾಗೂ ಗುಪ್ತಚಾರಿಕೆ ತನ್ನ ಹೊಣೆಗಾರಿಕೆ ಎಂದು ಹೇಳಿಕೊಂಡಿದ್ದಾರೆ. ತನ್ನ ಉದ್ಯೋಗದಾತರ ವಿಳಾಸವನ್ನು ಹೊಸ ದಿಲ್ಲಿಯಲ್ಲಿರುವ ಸಿಜಿಒ ಸಂಕೀರ್ಣ ಎಂದು ನಮೂದಿಸಿದ್ದು, ಅದು RAWದ ಮುಖ್ಯ ಕಚೇರಿಯ ವಿಳಾಸವಾಗಿದೆ.

ಇದಲ್ಲದೆ, ಭಾರತದ ಅತ್ಯಂತ ಬೃಹತ್ ಅರೆಸೇನಾ ಪಡೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲೂ ವಿಕಾಸ್ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. “135 ಸದಸ್ಯರುಳ್ಳ ತುಕಡಿಯ ಸಹಾಯಕ ಕಮಾಂಡೆಂಟ್ ಹುದ್ದೆ ತನ್ನದೆಂದು ವಿಕಾಸ್ ಯಾದವ್ ವಿವರಿಸಿದ್ದು, ಯಾದವ್ ಪ್ರತಿ ಗುಪ್ತಚರ ಮಾಹಿತಿ, ಯುದ್ಧ ತರಬೇತಿ, ಆಯುಧಗಳು ಹಾಗೂ ಪ್ಯಾರಾಟ್ರೂಪರ್ ತರಬೇತಿಯನ್ನು ಸ್ವೀಕರಿಸುತ್ತಿದ್ದರು” ಎಂದು ಅಮೆರಿಕ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಸೌಜನ್ಯ: new18.com

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News