ಕ್ರಿಮಿನಲ್ ಪ್ರಕರಣಗಳಲ್ಲಿ ‘ಮಾಧ್ಯಮ ವಿಚಾರಣೆ’ ವಿರುದ್ಧ ಸುಪ್ರೀಂ ಕಿಡಿ
ಹೊಸದಿಲ್ಲಿ: “ಮಾಧ್ಯಮ ವಿಚಾರಣೆಗಳ” ಕುರಿತು ಸುಪ್ರೀಂ ಕೋರ್ಟ್ ತನ್ನ ತೀವ್ರ ಅಸಮಾಧಾನವನ್ನು ಹೊರಹಾಕಿದೆ. “ತಾರತಮ್ಯದ ವರದಿಗಾರಿಕೆಯು ಒಬ್ಬ ವ್ಯಕ್ತಿ ಅಪರಾಧವೆಸಗಿದ್ದಾನೆಂದು ಸಾರ್ವಜನಿಕರಿಗೆ ಸಂಶಯವುಂಟಾಗಲು ಕಾರಣವಾಗುತ್ತದೆ,” ಎಂದು ಹೇಳಿದ ಸುಪ್ರೀಂ ಕೋರ್ಟ್, ಕ್ರಿಮಿನಲ್ ಪ್ರಕರಣಗಳ ಕುರಿತಂತೆ ನಡೆಸಲಾಗುವ ಮಾಧ್ಯಮ ಗೋಷ್ಠಿಗಳಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿದೆ. ಮೂರು ತಿಂಗಳೊಳಗೆ ಮಾರ್ಗಸೂಚಿಗಳನ್ನು ಸಲ್ಲಿಸುವಂತೆ ಹೇಳಲಾಗಿದೆ.
ಒಂದು ತಿಂಗಳೊಳಗೆ ಎಲ್ಲಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತಮ್ಮ ಸಲಹೆಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಬೇಕು. ಮುಂದಿನ ವಿಚಾರಣೆ ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
“ನ್ಯಾಯದಾನದ ಪ್ರಕ್ರಿಯೆಯು ಮಾಧ್ಯಮ ವಿಚಾರಣೆಗಳಿಂದ ಬಾಧಿತವಾಗುತ್ತದೆ. ತನಿಖೆಯ ಯಾವ ಹಂತದಲ್ಲಿ ವಿವರಗಳನ್ನು ಬಹಿರಂಗಪಡಿಸಬೇಕೆಂದು ನಿರ್ಧರಿಸಬೇಕಿದೆ. ಇದು ಸಂತ್ರಸ್ತರ ಮತ್ತು ಬಾಧಿತರ ಹಿತಾಸಕ್ತಿಗಳನ್ನು ಒಳಗೊಂಡಿರುವುದರಿಂದ ಮುಖ್ಯವಾಗಿದೆ. ಸಾರ್ವಜನಿಕರ ಹಿತಾಸಕ್ತಿಯೂ ಇದೆ. ಅಪರಾಧ ಸಂಬಂಧಿತ ವಿಚಾರಗಳಲ್ಲಿ ಮಾಧ್ಯಮಗಳ ವರದಿಯು ಸಾರ್ವಜನಿಕ ಹಿತಾಸಕ್ತಿಯ ವಿವಿಧ ಮಜಲುಗಳನ್ನು ಒಳಗೊಂಡಿದೆ,” ಎಂದು ನ್ಯಾಯಾಲಯ ಹೇಳಿದೆ.
“ಮೂಲಭೂತವಾಗಿ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೂ ಮಾಧ್ಯಮಗಳಿಗೆ ಸುದ್ದಿಗಳನ್ನು ಬಿತ್ತರಗೊಳಿಸುವ ಹಕ್ಕಿಗೂ ನೇರ ಸಂಬಂಧವಿದೆ, ಆದರೆ ನಾವು ಮಾಧ್ಯಮಗಳ ವಿಚಾರಣೆಗೆ ಅನುಮತಿಸಬಾರದು. ಜನರಿಗೆ ಮಾಹಿತಿ ಪಡೆಯುವ ಹಕ್ಕಿದೆ. ಆದರೆ ತನಿಖೆ ವೇಳೆ ಪ್ರಮುಖ ಸಾಕ್ಷ್ಯವನ್ನು ಬಹಿರಂಗಪಡಿಸಿದರೆ ತನಿಖೆ ಕೂಡ ಬಾಧಿತವಾಗಬಹುದು,” ಎಂದು ನ್ಯಾಯಾಲಯ ಹೇಳಿದೆ.
ಇದೇ ವಿಚಾರ ಕುರಿತಂತೆ ಸುಪ್ರೀಂ ಕೋರ್ಟ್ 2017ರಲ್ಲಿ ನೀಡಿದ ಸೂಚನೆ ಕುರಿತಂತೆ ಸಲ್ಲಿಸಲಾದ ಒಂದು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.
ಆರೋಪಿತರು ಮತ್ತು ಸಂತ್ರಸ್ತರ ಹಕ್ಕುಗಳನ್ನು ಗಮನದಲ್ಲಿರಿಸಿ ಪೊಲೀಸ್ ಪತ್ರಿಕಾಗೋಷ್ಠಿ ವೇಳೆ ಅನುಸರಿಸಬೇಕಾದ ನಿಯಮಗಳನ್ನು ರಚಿಸುವಂತೆ ಆಗ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆಗ ನ್ಯಾಯಾಲಯ ಆರು ವಾರಗಳ ಕಾಲಾವಕಾಶ ನೀಡಿತ್ತು.
ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಟಿ ಪ್ರತಿಕ್ರಿಯಿಸಿ ಸರಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ನೀಡುವುದಾಗಿ ತಿಳಿಸಿದರು.
“ಮಾಧ್ಯಮ ವಿಚಾರಣೆಯು ಸಂತ್ರಸ್ತ ಅಥವಾ ದೂರುದಾರರ ಖಾಸಗಿತನವನ್ನೂ ಉಲ್ಲಂಘಿಸುತ್ತದೆ ಮತ್ತು ಅವರು ಅಪ್ರಾಪ್ತರಾಗಿದ್ದರೆ ಇದು ಇನ್ನಷ್ಟು ಕಳವಳಕಾರಿ,” ಎಂದು ನ್ಯಾಯಾಲಯ ಹೇಳಿದೆ.