ಚೀತಾಗಳ ಸಾವುಗಳ ಕುರಿತು ಸಾರ್ವಜನಿಕ ಕಳವಳ ನಿವಾರಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

Update: 2023-08-07 15:25 GMT

ಸಾಂದರ್ಭಿಕ ಚಿತ್ರ | Photo: PTI

ಹೊಸದಿಲ್ಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ (ಕೆಎನ್ಪಿ)ದಲ್ಲಿಯ 20 ವಯಸ್ಕ ಚೀತಾಗಳ ಪೈಕಿ ಆರು ಚೀತಾಗಳ ಸಾವುಗಳ ಕುರಿತು ಸಾರ್ವಜನಿಕ ಕಳವಳವನ್ನು ನಿವಾರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರಕ್ಕೆ ಸೂಚಿಸಿದೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಈ ಚೀತಾಗಳನ್ನು ಕೆಎನ್ಪಿಗೆ ತರಲಾಗಿತ್ತು.

ನ್ಯಾ.ಬಿ.ಆರ್.ಗವಾಯಿ ನೇತೃತ್ವದ ಮೂವರು ನ್ಯಾಯಾಧೀಶರ ಪೀಠದ ಮುಂದೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು,ಚೀತಾಗಳ ಸಾವುಗಳು ದುರದೃಷ್ಟಕರವಾಗಿದ್ದರೂ ನಿರೀಕ್ಷಿತವಾಗಿದ್ದವು ಎಂದು ತಿಳಿಸಿದರು.

ಕೇಂದ್ರವು ಬದುಕುಳಿದಿರುವ ಚೀತಾಗಳ ಆರೋಗ್ಯದ ಮೇಲೆ ನಿಗಾಯಿರಿಸಲು 11 ಸದಸ್ಯರ ತಜ್ಞ ಸಮಿತಿಯನ್ನು ರಚಿಸಿದೆ ಎಂದು ತಿಳಿಸಿದ ಭಾಟಿ,ಅಂತರರಾಷ್ಟ್ರೀಯ ಚೀತಾ ಸಂರಕ್ಷಕರಿಂದ ಅಗತ್ಯ ಮಾಹಿತಿಗಳನ್ನು ಸರಕಾರವು ಪಡೆದುಕೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಸಾವಿಗೆ ಕಾರಣಗಳ ಕುರಿತು ಕೇಳಿದಾಗ ಭಾಟಿ, ಬಿರು ಬೇಸಿಗೆಯನ್ನು ದೂರಿದರು.

ಆಫ್ರಿಕಾ ಖಂಡದಲ್ಲಿ ಚಳಿಗಾಲವಿದ್ದರಿಂದ ಚೀತಾಗಳು ‘ವಿಂಟರ್ ಕೋಟ್ (ಚಳಿಯಿಂದ ರಕ್ಷಣೆಗಾಗಿ ಪ್ರಾಣಿಗಳಲ್ಲಿ ಬೆಳೆಯುವ ಹೆಚ್ಚುವರಿ ತುಪ್ಪಳ)’ಗಳನ್ನು ಬೆಳೆಸಿಕೊಂಡಿದ್ದವು ಮತ್ತು ಈ ವಿಂಟರ್ ಕೋಟ್ಗಳು ಸೋಂಕಿಗೆ ಕಾರಣವಾಗಿದ್ದವು ಎಂದು ಅವರು ವಿವರಿಸಿದರು.

ಅದನ್ನು ನಿರೀಕ್ಷಿಸಿರಲಿಲ್ಲವೇ? ಅವುಗಳನ್ನು ಭಾರತಕ್ಕೆ ತಂದಾಗ ಯಾವ ಕ್ರಮಗಳನ್ನು ನೀವು ತೆಗೆದುಕೊಂಡಿದ್ದೀರಿ? ಅವುಗಳನ್ನು ಇಲ್ಲಿಗೆ ಸ್ಥಳಾಂತರಿಸುವಾಗ ನಿಮ್ಮ ದೃಷ್ಟಿಕೋನವೇನಿತ್ತು ಎಂದು ನ್ಯಾ.ಪಿ.ಎಸ್.ನರಸಿಂಹ ಪ್ರಶ್ನಿಸಿದರು.

ಬದುಕುಳಿದಿರುವ ಚೀತಾಗಳಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು ಅವುಗಳ ಮೇಲೆ ನಿಕಟ ನಿಗಾಯಿರಿಸಲಾಗಿದೆ ಎಂದು ಭಾಟಿ ತಿಳಿಸಿದರು.

ಒಟ್ಟಿನಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವುದು ನೀವು ಹೇಳುತ್ತಿರುವುದರ ಸಾರಾಂಶವಾಗಿದೆ ಎಂದು ನ್ಯಾ.ನರಸಿಂಹ ಹೇಳಿದರು.

ಕೆಎನ್ಪಿಯಲ್ಲಿ ಚೀತಾಗಳ ಸಾವುಗಳನ್ನು ತಡೆಯಲು ಕೇಂದ್ರವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ದೂರಿ ಸಂರಕ್ಷಣಾವಾದಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಚೀತಾಗಳು ಸ್ಥಳೀಯ ವಾತಾವರಣಕ್ಕೆ ಒಗ್ಗಿಕೊಳ್ಳುವುದನ್ನು ಸುಲಭವಾಗಿಸಲು ರಚಿಸಲಾಗಿರುವ ಅಂತರರಾಷ್ಟ್ರೀಯ ಕಾರ್ಯಪಡೆಯೊಂದಿಗೆ ಸಮಾಲೋಚಿಸುವುದನ್ನು ಸರಕಾರವು ನಿಲ್ಲಿಸಿದೆ ಎದು ಅವರು ಅರ್ಜಿಯಲ್ಲಿ ಆರೋಪಿಸಿದ್ದರು.

ಚೀತಾ ಯೋಜನೆಯನ್ನು ಯಶಸ್ವಿಗೊಳಿಸಲು ತನ್ನ ಪ್ರಯತ್ನಗಳ ಕುರಿತು ಕೇಂದ್ರದ ಹೇಳಿಕೆಗಳನ್ನು ನಂಬದಿರಲು ಯಾವುದೇ ಕಾರಣವಿಲ್ಲ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಅಂತಿಮವಾಗಿ ಅರ್ಜಿಯನ್ನು ವಿಲೇವಾರಿಗೊಳಿಸಿತು. ಯೋಜನೆಯನ್ನು ನ್ಯಾಯಾಂಗಕ್ಕಿಂತ ಕ್ಷೇತ್ರದಲ್ಲಿಯ ತಜ್ಞರ ವಿವೇಚನೆಗೆ ಬಿಡುವುದು ಉತ್ತಮ ಎಂದು ಅದು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News