ಒಟಿಟಿ ನಿಯಂತ್ರಣಕ್ಕೆ ಸ್ವಾಯತ್ತ ಸಂಸ್ಥೆ ರಚನೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

Update: 2024-10-18 13:57 GMT

ಸುಪ್ರೀಂಕೋರ್ಟ್ | PTI

ಹೊಸದಿಲ್ಲಿ: ಓಟಿಟಿ ಮತ್ತಿತರ ಭಾರತೀಯ ಪ್ಲ್ಯಾಟ್‌ಫಾರಂಗಳಲ್ಲಿರುವ ವೀಡಿಯೊಗಳ ಮೇಲೆ ಕಣ್ಗಾವಲಿಡಲು,ಅವುಗಳ ಕಂಟೆಂಟ್‌ಗಳನ್ನು ನಿಯಂತ್ರಿಸಲು ಹಾಗೂ ಪರಿಷ್ಕರಿಸಲು ಸ್ವಾಯತ್ತ ಘಟಕವೊಂದನ್ನು ಸ್ಥಾಪಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.

ಈ ವಿಷಯವು ಕಾರ್ಯಾಂಗ ನೀತಿ ನಿರೂಪಕ ವಿಭಾಗದ ವ್ಯಾಪ್ತಿಗೆ ಬರುತ್ತದೆ ಹಾಗೂ ಸಂಬಂಧಪಟ್ಟ ಹಿತಧಾರಕರೊಂದಿಗೆ ಈ ಬಗ್ಗೆ ವ್ಯಾಪಕ ಸಮಾಲೋಚನೆಯ ಅಗತ್ಯವಿರುವುದರಿಂದ ಅರ್ಜಿಯನ್ನು ತಾನು ಪುರಸ್ಕರಿಸುವುದಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದಚೂಡ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ತಿಳಿಸಿತು.

ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಬಹುತೇಕ ಪಿಐಎಲ್ ಅರ್ಜಿಗಳು , ಆಡಳಿತನೀತಿಗೆ ಸಂಬಂಧಿಸಿದ್ದಾಗಿರುತ್ತವೆ. ನಮಗೆ ಅಪ್ಪಟವಾದ ಪಿಐಎಲ್‌ಗಳು ಬರುತ್ತಿಲ್ಲವೆಂದು ಭಾರತದ ಮುಖ್ಯ ನ್ಯಾಯಮೂರ್ತಿಯವರು ಹೇಳಿದರು.

ಆನಂತರ ಅರ್ಜಿಯನ್ನು ಸಲ್ಲಿಸಿದ ನ್ಯಾಯವಾದಿ ಶಶಾಂಕ್ ಶೇಖರ್ ಝಾ ಅವರು, ಅರ್ಜಿಯನ್ನು ಹಿಂತೆಗೆದುಕೊಳ್ಳಲು ತನಗೆ ಅನುಮತಿ ನೀಡಬೇಕು ಹಾಗೂ ಈ ಸಂಬಂಧಪಟ್ಟ ಕೇಂದ್ರ ಸಚಿವಾಲಯವನ್ನು ಸಮೀಪಿಸಿ ತನ್ನ ಅಹವಾಲುಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಆದರೆ ಸಿಜೆಐ ನೇತೃತ್ವದ ನ್ಯಾಯಪೀಠವು, ಅರ್ಜಿಯನ್ನು ವಜಾಗೊಳಿಸಲಾಗಿದೆಯೆಂದು ತಿಳಿಸಿತು.

ನೈಜಘಟನೆಯಾಧಾರಿತ ನೆಟ್‌ಫ್ಲಿಕ್ಸ್ ಸರಣಿ ‘‘ಐಸಿ 814: ಕಂದಹಾರ್ ಹೈಜಾಕ್’’ ಅನ್ನು ಪಿಐಎಲ್‌ನಲ್ಲಿ ಪ್ರಸ್ತಾವಿಸಿದ ಅರ್ಜಿದಾರ, ಓಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ವೀಡಿಯೊಗಳ ಕಂಟೆಂಟ್‌ಗಳನ್ನ ನಿಯಂತ್ರಿಸಲು ಸೂಕ್ತ ಕಾರ್ಯವಿಧಾನದ ಅತ್ಯವಿದೆಯೆಂದು ಪ್ರತಿಪಾದಿಸಿದ್ದರು.

ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡಲು ಕೇಂದ್ರೀಯ ಸೆನ್ಸಾರ್ ಮಂಡಳಿ ಎಂಬ ಸಾಂವಿಧಾನಿಕ ಸಂಸ್ಥೆಯಿದೆ ಮತ್ತು ಸಿನೆಮಾಟೋಗ್ರಾಫಿ ಕಾಯ್ದೆಯು ಬಹಿರಂಗವಾಗಿ ಪ್ರದರ್ಶಿಸಲಾಗುವ ಚಲನಚಿತ್ರಗಳಿಗೆ ಕಟ್ಟುನಿಟ್ಟಿನ ಪ್ರಮಾಣಪತ್ರ ನೀಡಿಕೆ ಪ್ರಕ್ರಿಯೆಯನ್ನು ರೂಪಿಸಿದೆ. ಆದರೆ ಓಟಿಟಿಯಲ್ಲಿ ಪ್ರಸಾರವಾಗುವ ಕಂಟೆಂಟ್‌ಗಳನ್ನು ನಿಯಂತ್ರಿಸಲು ಅಂತಹ ಯಾವುದೇ ಕಾನೂನು ಅಸ್ತಿತ್ವದಲ್ಲಿಲ್ಲವೆಂದು ಪಿಐಎಲ್ ಅರ್ಜಿಯಲ್ಲಿ ಗಮನಸೆಳೆಯಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News