ಸಂವಿಧಾನಕ್ಕೆ ನಿಷ್ಠೆ ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸಲು ಎನ್ಸಿ ಸಂಸದ ಲೋನೆಗೆ ಸುಪ್ರೀಂ ಕೋರ್ಟ್ ಸೂಚನೆ
ಹೊಸದಿಲ್ಲಿ: ಭಾರತದ ಸಂವಿಧಾನದಲ್ಲಿ ನಿಷ್ಠೆಯನ್ನು ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಸಂಸದ ಮುಹಮ್ಮದ್ ಅಕ್ಬರ್ ಲೋನೆ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಸೂಚಿಸಿದೆ.
ಲೋನೆ ಅವರು 2018ರಲ್ಲಿ ಆಗಿನ ಜಮ್ಮು-ಕಾಶ್ಮೀರ ರಾಜ್ಯದ ವಿಧಾನಸಭೆಯಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದ ಆರೋಪಿಯಾಗಿದ್ದಾರೆ ಎಂದು ಕಾಶ್ಮೀರಿ ಪಂಡಿತರ ಸಂಘಟನೆ ‘ರೂಟ್ಸ್ ಇನ್ ಕಾಶ್ಮೀರ್’ ವಿಧಿ 370ರ ರದ್ದತಿ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠಕ್ಕೆ ತಿಳಿಸಿದ ಬಳಿಕ ಈ ಬೆಳವಣಿಗೆ ನಡೆಯಿತು.
ಕೇಂದ್ರ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು, ಲೋನೆ ಅವರು ತಾನು ಸಂವಿಧಾನದಲ್ಲಿ ನಿಷ್ಠೆಯನ್ನು ಹೊಂದಿದ್ದೇನೆ ಮತ್ತು ಪ್ರದೇಶದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ವಿರೋಧಿಸುತ್ತೇನೆ ಎಂದು ಅಫಿಡವಿಟ್ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಲೋನೆ ಸಾಮಾನ್ಯ ವ್ಯಕ್ತಿಯಲ್ಲ, ಅವರು ಸಂಸದರಾಗಿದ್ದಾರೆ. ಅವರು ಕೇವಲ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದರೆ ಸಾಲುವುದಿಲ್ಲ ಎಂದು ವಾದಿಸಿದ ಮೆಹ್ತಾ, ಜಮ್ಮು-ಕಾಶ್ಮೀರ ಮತ್ತು ಇತರೆಡೆಗಳಲ್ಲಿ ಪಾಕಿಸ್ತಾನದಿಂದ ಭಯೋತ್ಪಾದನೆ ಮತ್ತು ಯಾವುದೇ ಪ್ರತ್ಯೇಕತಾವಾದಿ ಚಟುವಟಿಕೆಯನ್ನು ತಾನು ವಿರೋಧಿಸುತ್ತೇನೆ ಎಂದು ಅವರು ಹೇಳಬೇಕು ಮತ್ತು ಅದು ದಾಖಲಾಗಬೇಕು ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿಗಳನ್ನು ವಿರೋಧಿಸಿರುವ ವಕೀಲ ಅಶ್ವಿನಿ ಉಪಾಧ್ಯಾಯ ಪರ ಹಿರಿಯ ವಕೀಲ ರಾಕೇಶ ದ್ವಿವೇದಿಯವರು,ಲೋನೆ ಕ್ಷಮೆಯನ್ನು ಯಾಚಿಸಬೇಕು ಎಂದು ಆಗ್ರಹಿಸಿದರು.
ಲೋನೆ ಪರ ಹಿರಿಯ ವಕೀಲ ಕಪಿಲ ಸಿಬಲ್ ಅವರು, ತನ್ನ ಕಕ್ಷಿದಾರರು ಇಂತಹ ಯಾವುದೇ ಹೇಳಿಕೆಗಳನ್ನು ನೀಡಿದ್ದರೆ ಅದನ್ನು ತಾನು ಸಮ್ಮತಿಸುವುದಿಲ್ಲ. ಅಫಿಡವಿಟ್ ಸಲ್ಲಿಸುವಂತೆ ಅವರಿಗೇ ಸೂಚಿಸಿ, ತನಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.