ನವಾಬ್ ಮಲಿಕ್ ಜಾಮೀನನ್ನು 6 ತಿಂಗಳು ವಿಸ್ತರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ, ಮಹಾರಾಷ್ಟ್ರದ ಮಾಜಿ ಸಚಿವ ನವಾಬ್ ಮಲಿಕ್ ಗೆ ವೈದ್ಯಕೀಯ ನೆಲೆಯಲ್ಲಿ ನೀಡಲಾಗಿರುವ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ ಇನ್ನೂ ಆರು ತಿಂಗಳು ವಿಸ್ತರಿಸಿದೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಮಲಿಕ್ರನ್ನು ಭೂಗತ ಪಾತಕಿ ದಾವೂದ್ ಇ್ರಬಾಹೀಮ್ ಮತ್ತು ಅವನ ಸಹಾಯಕರು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ 2022 ಫೆಬ್ರವರಿಯಲ್ಲಿ ಅನುಷ್ಠಾನ ನಿರ್ದೇಶನಾಲಯವು ಬಂಧಿಸಿತ್ತು.
ಆಗಸ್ಟ್ ನಲ್ಲಿ, ಸುಪ್ರೀಂ ಕೋರ್ಟ್ ಮಲಿಕ್ ವೈದ್ಯಕೀಯ ನೆಲೆಯಲ್ಲಿ ಎರಡು ತಿಂಗಳ ಜಾಮೀನು ನೀಡಿತ್ತು. ಮೂತ್ರಪಿಂಡ ಕಾಯಿಲೆ ಮತ್ತು ಇತರ ಕಾಯಿಲೆಗಳಿಗಾಗಿ ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ ಎಂದು ಮಲಿಕ್ ನ್ಯಾಯಾಲಯದಲ್ಲಿ ವಾದಿಸಿದ್ದರು.ಅಕ್ಟೊಬರ್ ನಲ್ಲಿ, ನ್ಯಾಯಾಲಯವು ಜಾಮೀನನ್ನು ಮೂರು ತಿಂಗಳು ವಿಸ್ತರಿಸಿತು.
ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ ಅವರು ಸಲ್ಲಿಸಿರುವ ಅರ್ಜಿಗಳನ್ನು 2022 ನವೆಂಬರ್ನಲ್ಲಿ ವಿಚಾರಣಾ ನ್ಯಾಯಾಲಯವು ಮತ್ತು ಈ ವರ್ಷದ ಜುಲೈಯಲ್ಲಿ ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಅವರು ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿದ್ದರು.
ಮಲಿಕ್ 1999ರಲ್ಲಿ ಮುಂಬೈಯ ಕುರ್ಲಾದಲ್ಲಿ ಸುಮಾರು ಮೂರು ಎಕರೆ ಜಮೀನನ್ನು ಖರೀದಿಸಿದ್ದಾರೆ ಹಾಗೂ 1999 ಮತ್ತು 2005ರ ನಡುವೆ 55 ಲಕ್ಷ ರೂ. ನಗದು ಸೇರಿದಂತೆ 85 ಲಕ್ಷ ರೂಪಾಯಿ ಮೊತ್ತವನ್ನು ದಾವೂದ್ ನ ಸಹೋದರಿಗೆ ಪಾವತಿಸಿದ್ದಾರೆ ಎಂದು ಅನುಷ್ಠಾನ ನಿರ್ದೇಶನಾಲಯ ಆರೋಪಿಸಿದೆ. ಆ ಜಮೀನನ್ನು ದಾವೂದ್ ಬಂಟರು ಅದರ ಮೂಲ ಮಾಲೀಕರಿಂದ ವಶಪಡಿಸಿಕೊಂಡು ಮಲಿಕ್ ಗೆ ಮಾರಾಟ ಮಾಡಿದ್ದರು ಎಂದು ಅದು ಆರೋಪಿಸಿದೆ.