ಎಡಿಟರ್ಸ್ ಗಿಲ್ಡ್ ಸದಸ್ಯರಿಗೆ ಬಂಧನದ ವಿರುದ್ಧ ರಕ್ಷಣೆಯನ್ನು ವಿಸ್ತರಿಸಿದ ಸುಪ್ರೀಂ ಕೋರ್ಟ್

Update: 2023-09-11 16:11 GMT

ಸುಪ್ರೀಂ ಕೋರ್ಟ್ | Photo: PTI  

ಹೊಸದಿಲ್ಲಿ: ಮಾಧ್ಯಮಗಳಿಂದ ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರದ ಏಕಪಕ್ಷೀಯ ವರದಿಗಾರಿಕೆ ಕುರಿತು ಸತ್ಯಶೋಧನಾ ತಂಡದ ವರದಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಡಿಟರ್ಸ್ ಗಿಲ್ಡ್ ನ ನಾಲ್ವರು ಸದಸ್ಯರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗದುಕೊಳ್ಳದಂತೆ ಮಣಿಪುರ ಪೊಲೀಸರಿಗೆ ಸೂಚಿಸಿದ್ದ ತನ್ನ ಸೆ.6ರ ಆದೇಶವನ್ನು ಸೋಮವಾರ ಸರ್ವೋಚ್ಚ ನ್ಯಾಯಾಲಯವು ಸೆ.15ರವರೆಗೆ ವಿಸ್ತರಿಸಿದೆ.

ಸತ್ಯಶೋಧನಾ ತಂಡದ ವರದಿಯ ಲೇಖಕರಾದ ಸೀಮಾ ಗುಹಾ,ಭರತ ಭೂಷಣ ಮತ್ತು ಸಂಜಯ ಕಪೂರ್ ಹಾಗೂ ಎಡಿಟರ್ಸ್ ಗಿಲ್ಡ್ ನಅಧ್ಯಕ್ಷೆ ಸೀಮಾ ಮುಸ್ತಫಾ ಅವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಸತ್ಯಶೋಧನಾ ತಂಡದ ವರದಿಯು ಸುಳ್ಳು, ಕಪೋಲಕಲ್ಪಿತ ಮತ್ತು ಪ್ರಾಯೋಜಿತವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಎಡಿಟರ್ಸ್ ಗಿಲ್ಡ್ ತನ್ನ ವಿರುದ್ಧದ ಎರಡು ಎಫ್ಐಆರ್ ಗಳನ್ನು ರದ್ದುಗೊಳಿಸುವಂತೆ ನಿರ್ದೇಶನ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದೆ. ಮೇ 3ರಂದು ಭುಗಿಲೆದ್ದಿದ್ದ ಮೈತೆಯಿಗಳು ಮತ್ತು ಕುಕಿಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಈವರೆಗೆ 195ಕ್ಕೂ ಅಧಿಕ ಜನರು ಮೃತಪಟ್ಟಿದ್ದು,60,000 ಜನರು ಸ್ಥಳಾಂತರಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News