ಡಿಕೆಶಿ ವಿರುದ್ಧ ಸಿಬಿಐ ತನಿಖೆ ಮುಂದುವರಿಕೆಗೆ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
ಹೊಸದಿಲ್ಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣವೊಂದರಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ಸ್ಥಗಿತಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿಗೆ ಅವರ (ಶಿವಕುಮಾರ್) ವಾದವನ್ನು ಆಲಿಸದೆ ತಡೆ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
‘‘ನಾವು ಹಾಗೆ ಮಾಡುವುದಿಲ್ಲ. ಹಾಗೆ ಮಾಡುವುದೆಂದರೆ, ಏಕಪಕ್ಷೀಯ ಆದೇಶ ನೀಡಿದಂತೆ. ನಾವು ಅವರ ವಾದವನ್ನು ಆಲಿಸಬೇಕು’’ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಮ್. ತ್ರಿವೇದಿ ಅವರನ್ನೊಳಗೊಂಡ ನ್ಯಾಯ ಪೀಠವೊಂದು ಸಿಬಿಐ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ಹೇಳಿತು.
ಹೈಕೋರ್ಟ್ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಮತ್ತು ತನಿಖೆ ಮುಂದುವರಿಯಲು ಅವಕಾಶ ನೀಡುವಂತೆ ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
‘‘ತೊಂಭತ್ತು ಶೇಕಡ ತನಿಖೆ ಮುಕ್ತಾಯವಾಗಿದೆ’’ ಎಂದು ರಾಜು ಹೇಳಿದರು.
ಆದರೆ, ನ್ಯಾಯಾಲಯವು ಶಿವಕುಮಾರ್ ಗೆ ನೋಟಿಸ್ ನೀಡಿತು ಹಾಗೂ ಪ್ರಕರಣದ ಮುಂದಿನ ವಿಚಾರಣೆಯನ್ನು ನ. 7ಕ್ಕೆ ನಿಗದಿಪಡಿಸಿತು.
2017ರಲ್ಲಿ ಆದಾಯ ತೆರಿಗೆ ಇಲಾಖೆಯು ಶಿವಕುಮಾರ್ ವಿರುದ್ಧ ದಾಳಿ ನಡೆಸಿತ್ತು. ಅದರ ಆಧಾರದಲ್ಲಿ ಅನುಷ್ಠಾನ ನಿರ್ದೇಶನಾಲಯವು ತನ್ನ ತನಿಖೆ ಆರಂಭಿಸಿತು. ಅನುಷ್ಠಾನ ನಿರ್ದೇಶನಾಲಯದ ತನಿಖೆಯ ಬಳಿಕ, ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲು ಸಿಬಿಐ ರಾಜ್ಯ ಸರಕಾರದ ಅನುಮೋದನೆ ಕೋರಿತ್ತು.
ರಾಜ್ಯ ಸರಕಾರವು 2019 ಸೆ. 25ರಂದು ಅನುಮೋದನೆ ನೀಡಿತು. 2020 ಅ.3ರಂದು, 74.93 ಕೋಟಿ ರೂಪಾಯಿ ಮೊತ್ತದ ಅಕ್ರಮ ಸಂಪತ್ತನ್ನು ಹೊಂದಿದ ಆರೋಪದಲ್ಲಿ ಸಿಬಿಐಯು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು.