ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ನಾಳೆ(ಮೇ 10) ಸುಪ್ರೀಂ ತೀರ್ಪು
ಹೊಸದಿಲ್ಲಿ : ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ.
ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿಯ ಕುರಿತ ತೀರ್ಪನ್ನು ನಾವು ಶುಕ್ರವಾರ ಪ್ರಕಟಿಸಲಿದ್ದೇವೆ. ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕೂಡಾ ಅಂದೇ ಕೈಗೆತ್ತಿಕೊಳ್ಳಲಾಗುವುದು ಎಂದು ಅರ್ಜಿಯ ಆಲಿಕೆ ನಡೆಸುತ್ತಿರುವ ನ್ಯಾಯಪೀಠದ ನೇತೃತ್ವ ವಹಿಸಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಹೇಳಿದ್ದಾರೆ.
ಸರಕು ಹಾಗೂ ಸೇವಾ ತೆರಿಗೆಗೆ ಸಂಬಂಧಿಸಿದ ವಿಷಯದಲ್ಲಿ ಕೇಂದ್ರ ಸರಕಾರದ ಪರವಾಗಿ ಹಾಜರಾಗಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ಕೇಜ್ರಿವಾಲ್ ಅವರ ಅರ್ಜಿಯನ್ನು ಪಟ್ಟಿ ಮಾಡುವ ಬಗ್ಗೆ ನ್ಯಾಯಾಲಯದಿಂದ ಸ್ಪಷ್ಟೀಕರಣ ಕೇಳಿದ ಸಂದರ್ಭ ಖನ್ನಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಹಾಗೂ ಬೇಲಾ ಎಂ.ತ್ರಿವೇದಿ ನ್ಯಾಯಪೀಠ ಇನ್ನಿಬ್ಬರು ಸದಸ್ಯರು.
ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಪ್ರಸಕ್ತ ಅವರನ್ನು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಕಸ್ಟಡಿಯಲ್ಲಿರಿಸಲಾಗಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠವು, ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು ನೀಡುವ ಕುರಿತ ತನ್ನ ತೀರ್ಪನ್ನು ಕಾದಿರಿಸಿತ್ತು.
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ತನಗೆ ಮಧ್ಯಂತರ ಜಾಮೀನು ನೀಡಬೇಕೆಂದು ಕೋರಿ ಕೇಜ್ರಿವಾಲ್ ಸಲ್ಲಿಸಿದ ಜಾಮೀನು ಅರ್ಜಿಯ ಮೇಲಿನ ತನ್ನ ಮಧ್ಯಂತರ ಆದೇಶವನ್ನು ನ್ಯಾಯಪೀಠ ಮೇ 7ರಂದು ಕಾದಿರಿಸಿತ್ತು.