ಅಸ್ಸಾಂ ಬಂಧನ ಶಿಬಿರಗಳಲ್ಲಿಯ 17 ವಿದೇಶಿಯರ ಗಡಿಪಾರಿಗೆ ಸುಪ್ರೀಂ ಕೋರ್ಟ್ ಆದೇಶ

Update: 2024-05-17 15:26 GMT

ಸುಪ್ರೀಂ ಕೋರ್ಟ್ | PC : PTI 

ಹೊಸದಿಲ್ಲಿ: ಅಸ್ಸಾಮಿನ ಬಂಧನ ಶಿಬಿರಗಳಲ್ಲಿರುವ 17 ವಿದೇಶಿ ಪ್ರಜೆಗಳ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡಿರುವ ಸರ್ವೋಚ್ಚ ನ್ಯಾಯಾಲಯವು ಅವರನ್ನು ತಕ್ಷಣ ಗಡಿಪಾರು ಮಾಡುವಂತೆ ಕೇಂದ್ರ ಸರಕಾರವನ್ನು ಆದೇಶಿಸಿದೆ.

ಈ ಬಂಧನ ಕೇಂದ್ರಗಳ ಸ್ಥಿತಿ ಮತ್ತು ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಬಂಧನದಲ್ಲಿರುವವರ ಬಿಡುಗಡೆ ಕುರಿತು ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಈ ಹಿಂದೆ,ಈ ಕೇಂದ್ರಗಳಿಗೆ ಭೇಟಿ ನೀಡುವಂತೆ ಮತ್ತು ಎಷ್ಟು ಜನರನ್ನು ಎರಡು ವರ್ಷಗಳಿಗೂ ಅಧಿಕ ಸಮಯದಿಂದ ಬಂಧನದಲ್ಲಿರಿಸಲಾಗಿದೆ ಎನ್ನುವುದನ್ನು ದಾಖಲೆಗಳಿಂದ ಖಚಿತ ಪಡಿಸಿಕೊಳ್ಳುವಂತೆ ಅಸ್ಸಾಂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿತ್ತು.

ಬಂಧನ ಕೇಂದ್ರಗಳಲ್ಲಿ 17 ವಿದೇಶಿ ಪ್ರಜೆಗಳಿದ್ದು,ಈ ಪೈಕಿ ನಾಲ್ವರು ಎರಡು ವರ್ಷಗಳಿಗೂ ಅಧಿಕ ಸಮಯದಿಂದ ಬಂಧನದಲ್ಲಿದ್ದಾರೆ ಎಂದು ಪ್ರಾಧಿಕಾರವು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

ಅದರಂತೆ ನ್ಯಾಯಾಲಯವು,ಈ 17 ಘೋಷಿತ ವಿದೇಶಿಯರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ,ಹೀಗಾಗಿ ಕೇಂದ್ರ ಸರಕಾರವು ಅವರನ್ನು ಗಡಿಪಾರು ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎರಡು ವರ್ಷಕ್ಕೂ ಅಧಿಕ ಸಮಯದಿಂದ ಬಂಧನದಲ್ಲಿರುವ ನಾಲ್ವರ ಗಡಿಪಾರಿಗೆ ಆದ್ಯತೆ ನೀಡಬೇಕು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಬಹಳ ಹಿಂದೆಯೇ ಭಾರತದಿಂದ ಹೊರ ಹೋಗಬೇಕಿದ್ದ ವಿದೇಶಿ ಪ್ರಜೆಗಳಿಗೆ ನೀವು ಆತಿಥ್ಯ ನೀಡುತ್ತಿದ್ದೀರಿ ಎಂದು ಲಘು ಧಾಟಿಯಲ್ಲಿ ಟೀಕಿಸಿದ ನ್ಯಾ.ಓಕಾ,ಅದೇ ಹಣವನ್ನು ಭಾರತದ ಪ್ರಜೆಗಳ ಕಲ್ಯಾಣಕ್ಕೆ ಬಳಸಬಹುದು ಎಂದರು.

ವಿದೇಶಿಯರ ನ್ಯಾಯಮಂಡಳಿಯು ಅವರು ವಿದೇಶಿಯರು ಎನ್ನುವುದನ್ನು ಪತ್ತೆ ಹಚ್ಚಿದ ಬಳಿಕ ಏನು ಮಾಡಲಾಗುತ್ತದೆ ಎನ್ನುವುದನ್ನು ತಿಳಿಯಲು ಬಯಸಿದ ನ್ಯಾ.ಭುಯಾನ್,ನೀವು (ಕೇಂದ್ರ) ನೆರೆಯ ದೇಶದೊಂದಿಗೆ ಗಡಿಪಾರು ಒಪ್ಪಂದವನ್ನು ಹೊಂದಿದ್ದೀರಾ? ಒಪ್ಪಂದವಿಲ್ಲದಿದ್ದರೆ ಅವರನ್ನು ಗಡಿಪಾರು ಮಾಡಲು ಸಾಧ್ಯವೇ? ನೀವು ಅವರನ್ನು ಬಂಧನ ಕೇಂದ್ರದಲ್ಲಿಯೇ ಇರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ತನ್ನ ಆದೇಶದ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜು.26ಕ್ಕೆ ನಿಗದಿಗೊಳಿಸಿತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News