ಅತ್ಯಾಚಾರ ಸಂತ್ರಸ್ತೆ 14ರ ಬಾಲಕಿಯ ವೈದ್ಯಕೀಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ
ಹೊಸದಿಲ್ಲಿ : ಸುಮಾರು 30 ವಾರಗಳ ಗರ್ಭಿಣಿಯಾಗಿರುವ ಮಹಾರಾಷ್ಟ್ರದ 14ರ ಹರೆಯದ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಗರ್ಭಪಾತಕ್ಕೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಅನುಮತಿ ನೀಡಿದೆ. ಬಾಲಕಿಯ ಸ್ಥಿತಿ ಮತ್ತು ಗರ್ಭಾವಸ್ಥೆಯ ಮುಂದುವರಿಕೆಯಿಂದ ಆಕೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಸೂಚಿಸಿದ್ದ ವೈದ್ಯಕೀಯ ವರದಿಯನ್ನು ನ್ಯಾಯಾಲಯವು ಪರಿಗಣಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಜೆ.ಬಿ.ಪರ್ಡಿವಾಲಾ ಅವರ ಪೀಠವು ಸಂವಿಧಾನದ 142ನೇ ವಿಧಿಯಡಿ ತನ್ನ ಅಧಿಕಾರವನ್ನು ಬಳಸಿ ವೈದ್ಯಕೀಯ ಗರ್ಭಪಾತಕ್ಕೆ ಆದೇಶಿಸಿತು. ಬಾಲಕಿಯ ತಾಯಿ ಪುತ್ರಿಯ ಗರ್ಭಪಾತಕ್ಕೆ ಅನುಮತಿಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು.
ವೈದ್ಯಕೀಯ ಗರ್ಭಪಾತಕ್ಕೆ ಅನುಮತಿಯನ್ನು ನಿರಾಕರಿಸಿದ್ದ ಬಾಂಬೆ ಉಚ್ಚ ನ್ಯಾಯಾಲಯದ 2024, ಎ.4ರ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿ ಹಾಕಿತು.
ಬಾಲಕಿಯ ವೈದ್ಯಕೀಯ ಗರ್ಭಪಾತವನ್ನು ಮಾಡಲು ತಜ್ಞ ವೈದ್ಯರ ತಂಡವೊಂದನ್ನು ರಚಿಸುವಂತೆ ಸರ್ವೋಚ್ಚ ನ್ಯಾಯಾಲಯವು ಮುಂಬೈನ ಸಯನ್ ಆಸ್ಪತ್ರೆಯ ಡೀನ್ ಗೆ ನಿರ್ದೇಶನ ನೀಡಿತು.
ವಿಷಯದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿದ ನ್ಯಾಯಾಲಯವು ಸರಕಾರದ ವೆಚ್ಚದಲ್ಲಿ ವೈದ್ಯಕೀಯ ಗರ್ಭಪಾತ ನಡೆಸುವಂತೆ ಮಧ್ಯಂತರ ನಿರ್ದೇಶನವನ್ನು ಹೊರಡಿಸಿತು.
ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ನಿಗದಿತ 24 ವಾರಗಳ ಗಡುವಿನ ಬಳಿಕ ಈ ಬಗ್ಗೆ ನವಿಮುಂಬೈನಲ್ಲಿ 2024, ಮಾ.20ರಂದು ಎಫ್ಐಆರ್ ದಾಖಲಾಗಿತ್ತು.