ಪ್ರತಿ ಮತಗಟ್ಟೆಯ ಮತದಾನ ಅಂಕಿಅಂಶ ಒದಗಿಸಲು ಚುನಾವಣಾ ಆಯೋಗಕ್ಕೆ ಸೂಚನೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಚುನಾವಣಾ ಪ್ರಕ್ರಿಯೆಯ ನಡುವೆ ಯಾವುದೇ ಹಸ್ತಕ್ಷೇಪ ನಡೆಸಲು ಹಿಂಜರಿಕೆ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಬೂತ್ ಮಟ್ಟದ ಮತದಾನ ಅಂಕಸಂಖ್ಯೆಗಳನ್ನು ಹೊಂದಿದ ಫಾರ್ಮ್ 17ಸಿ ಪ್ರತಿಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಚುನಾವಣಾ ಆಯೋಗಕ್ಕೆ ಸೂಚಿಸಲು ಇಂದು ನಿರಾಕರಿಸಿದೆ ಹಾಗೂ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ಸತೀಶ್ ಚಂದ್ರ ಶರ್ಮ ಅವರ ರಜಾಕಾಲದ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದ್ದು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಹಸ್ತಕ್ಷೇಪದಿಂದ ದೂರವಿರಲು ಬಯಸುವುದಾಗಿ ಹೇಳಿತಲ್ಲದೆ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಗಳನ್ನುಂಟು ಮಾಡಲಾಗದು ಎಂದು ಹೇಳಿದೆ.
“ನಮಗೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಲಾಗದು, ಪ್ರಾಧಿಕಾರದಲ್ಲಿ ನಾವು ವಿಶ್ವಾಸ ಇರಿಸೋಣ,” ಎಂದು ನ್ಯಾಯಪೀಠ ಹೇಳಿದೆ.
ಈ ಮಧ್ಯಂತರ ಅರ್ಜಿಯನ್ನು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಲ್ಲಿಸಿತ್ತು. ಇದು 2019ರಲ್ಲಿ ಸಲ್ಲಿಸಿದ್ದ ಅರ್ಜಿಯ ಭಾಗವಾಗಿತ್ತು. 2019ರಲ್ಲಿ ಮತದಾನ ಅಂಕಿಸಂಖ್ಯೆಯಗಳಲ್ಲಿ ವ್ಯತ್ಯಯಗಳಿವೆ ಎಂದು ಆರೋಪಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಆಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.