ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್
Update: 2024-03-15 08:59 GMT
ಹೊಸದಿಲ್ಲಿ: ನೂತನ ಚುನಾವಣಾ ಆಯುಕ್ತರ ನೇಮಕಾತಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಕುರಿತ ವಿಚಾರಣೆಯನ್ನು ಮುಂದಿನ ವಾರ ನಡೆಸುವುದಾಗಿ ಪ್ರಕಟಿಸಿದೆ.
ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಮಾಜಿ ಐಎಎಸ್ ಅಧಿಕಾರಿ ಗ್ಯಾನೇಶ್ ಕುಮಾರ್ ಹಾಗೂ ಸುಖ್ಬೀರ್ ಸಿಂಗ್ ಸಂಧು ಅವರನ್ನು ಚುನಾವಣಾ ಆಯುಕ್ತ ಹುದ್ದೆಗೆ ಆಯ್ಕೆ ಮಾಡಿತ್ತು.
ಫೆಬ್ರವರಿ ತಿಂಗಳಲ್ಲಿ ಜ್ಞಾನೇಶ್ ಕುಮಾರ್ ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಸುಖ್ಬೀರ್ ಸಿಂಗ್ ಸಂಧು ಉತ್ತರಾಖಂಡ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿಯಾಗಿದ್ದರು.
ಫೆಬ್ರವರಿ 12ರಂದು ನಿವೃತ್ತರಾದ ಮಾಜಿ ಚುನಾವಣಾ ಆಯಕ್ತ ಅನೂಪ್ ಚಂದ್ರ ಪಾಂಡೆ ಹಾಗೂ ಮಾರ್ಚ್ 8ರಂದು ಮತ್ತೊಬ್ಬ ಚುನಾವಣಾ ಆಯಕ್ತ ಅರುಣ್ ಗೋಯಲ್ ದಿಢೀರ್ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ನೂತನ ಚುನಾವಣಾ ಆಯಕ್ತರನ್ನಾಗಿ ನೇಮಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು.