ಮಧ್ಯಪ್ರದೇಶದ ಭೋಜಶಾಲಾ-ಕಮಾಲ್ ಮಸೀದಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

Update: 2024-04-01 15:10 GMT

Photo: scroll.in

ಹೊಸದಿಲ್ಲಿ : ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ ದೇವಸ್ಥಾನ-ಕಮಾಲ್ ಮೌಲಾ ಮಸೀದಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ( ಎಎಸ್ಐ) ಇಲಾಖೆಯಿಂದ ವೈಜ್ಞಾನಿಕ ಸಮೀಕ್ಷಗೆ ತಡೆಯಾಜ್ಞೆಯನ್ನು ನೀಡಲು ಸರ್ವೋಚ್ಛ ನ್ಯಾಯಾಲಯವು ಸೋಮವಾರ ನಿರಾಕರಿಸಿದೆ. ತನ್ನ ಅನುಮತಿಯಿಲ್ಲದೆ ಎಎಸ್ಐ ಸಮೀಕ್ಷೆಯ ಫಲಿತಾಂಶದ ಆಧಾರದಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಿರುವ ನ್ಯಾಯಾಲಯವು,ಸಂಕೀರ್ಣದ ಆವರಣದ ಸ್ವರೂಪವನ್ನು ಬದಲಿಸುವ ಯಾವುದೇ ಭೌತಿಕ ಉತ್ಖನನವನ್ನು ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಧ್ಯಕಾಲೀನ ಯುಗದ ಈ ಕಟ್ಟಡವನ್ನು ಹಿಂದುಗಳು ಮತ್ತು ಮುಸ್ಲಿಮರು ತಮ್ಮದೆಂದು ಪ್ರತಿಪಾದಿಸುತ್ತಿದ್ದಾರೆ.

ಎಎಸ್ಐನಿಂದ ಸಂರಕ್ಷಿತ 11ನೇ ಶತಮಾನದ ಸ್ಮಾರಕವಾಗಿರುವ ಭೋಜಶಾಲಾವನ್ನು ಹಿಂದುಗಳು ವಾಗ್ದೇವಿ (ಸರಸ್ವತಿ)ಯ ದೇವಸ್ಥಾನವೆಂದು ಪರಿಗಣಿಸಿದ್ದರೆ ಮುಸ್ಲಿಮರು ಅದನ್ನು ಕಮಾಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.

ಎಎಸ್ಐ 2003,ಎ.7ರಂದು ಜಾರಿಗೆ ತಂದಿರುವ ವ್ಯವಸ್ಥೆಯಂತೆ ಹಿಂದುಗಳು ಮಂಗಳವಾರಗಳಂದು ಸಂಕೀರ್ಣದಲ್ಲಿ ಪೂಜೆಗಳನ್ನು ನಡೆಸುತ್ತಿದ್ದರೆ,ಶುಕ್ರವಾರಗಳಲ್ಲಿ ಮುಸ್ಲಿಮರು ನಮಾಝ್ ಸಲ್ಲಿಸುತ್ತಾರೆ.

ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲು ಎಎಸ್ಐಗೆ ನಿರ್ದೇಶನ ನೀಡಿರುವ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮಾ.11ರ ಆದೇಶದ ವಿರುದ್ಧ ಮೌಲಾನಾ ಕಮಾಲುದ್ದೀನ್ ವೆಲ್ಫೇರ್ ಸೊಸೈಟಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್ ಮತ್ತು ಪಿ.ಕೆ.ಮಿಶ್ರಾ ಅವರ ಪೀಠವು ಕೈಗೆತ್ತಿಕೊಂಡಿತ್ತು.

ಕೇಂದ್ರ,ಮಧ್ಯಪ್ರದೇಶ ಸರಕಾರ,ಎಎಸ್ಐ ಮತ್ತು ಇತರರಿಗೆ ನೋಟಿಸ್ ಗಳನ್ನು ಹೊರಡಿಸಿದ ಸರ್ವೋಚ್ಛ ನ್ಯಾಯಾಲಯವು ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News