ಐನ್‌ಸ್ಟೀನ್‌, ಡಾರ್ವಿನ್‌ ಸಿದ್ಧಾಂತ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್‌ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Update: 2023-10-13 10:38 GMT

ಹೊಸದಿಲ್ಲಿ: ಖ್ಯಾತ ವಿಜ್ಞಾನಿಗಳಾದ ಚಾರ್ಲ್ಸ್ ಡಾರ್ವಿನ್‌ ಅವರ‌ ಮಾನವ ವಿಕಾಸವಾದ ಸಿದ್ಧಾಂತ ಮತ್ತು ಆಲ್ಬರ್ಟ್‌ ಐನ್‌ಸ್ಟೀನ್‌ ಅವರ ವಿಶೇಷ ಸಾಪೇಕ್ಷ ಸಿದ್ಧಾಂತವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ವಜಾಗೊಳಿಸಿದೆ.

ವಿಜ್ಞಾನಿಗಳ ನಂಭಿಕೆಗಳನ್ನು ಪ್ರಶ್ನಿಸಲು ಸಂವಿಧಾನದ ವಿಧಿ 23ನೇ ಅನ್ವಯ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಹೇಳಿದೆ.

“ಡಾರ್ವಿನ್‌ ಮತ್ತು ಐನ್‌ಸ್ಟೀನ್‌ ಅವರ ಸಿದ್ಧಾಂತಗಳು ತಪ್ಪೆಂದು ಅರ್ಜಿದಾರರು ಸಾಬೀತುಪಡಿಸಲು ಬಯಸಿದ್ದಾರೆ ಮತ್ತು ಅದಕ್ಕಾಗಿ ಅವರಿಗೊಂದು ವೇದಿಕೆ ಬೇಕಿದೆ. ಅದು ಅವರ ನಂಬಿಕೆಯಾಗಿದ್ದರೆ ಅವರು ಅದನ್ನೇ ಪ್ರಚಾರ ಮಾಡಬಹುದು. ಆದರೆ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳನ್ನು ನಿಭಾಯಿಸುವ ಸಂವಿಧಾನದ 32ನೇ ವಿಧಿಯಡಿ ಈ ಕುರಿತು ಅರ್ಜಿ ಸಲ್ಲಿಸಲಾಗದು,” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದ ರಾಜ್‌ಕುಮಾರ್‌ ತಮ್ಮ ವಾದ ಮಂಡನೆ ವೇಳೆ ತಾವು ಶಾಲೆ ಮತ್ತು ಕಾಲೇಜಿನಲ್ಲಿ ಐನ್‌ಸ್ಟೀನ್‌ ಮತ್ತು ಡಾರ್ವಿನ್‌ ಸಿದ್ಧಾಂತದ ಬಗ್ಗೆ ಕಲಿತಿದ್ದಾಗಿ ಹಾಗೂ ತಾನು ಕಲಿತ್ತಿದ್ದು ತಪ್ಪೆಂದು ತಿಳಿದುಕೊಂಡಿದ್ಧಾಗಿ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಹಾಗಾದರೆ ನೀವು ನಿಮ್ಮ ಸಿದ್ಧಾಂತವನ್ನು ಸಾಬೀತುಪಡಿಸಿ. ಇದರಲ್ಲಿ ಸುಪ್ರೀಂ ಕೋರ್ಟಿಗೆ ಮಾಡಲು ಏನಿದೆ? ಶಾಲೆಯಲ್ಲಿ ಏನೋ ಕಲಿತಿದ್ದೀರಿ ಎಂದು ಹೇಳಿದ್ದೀರಿ, ನೀವು ವಿಜ್ಞಾನ ವಿದ್ಯಾರ್ಥಿ. ಆ ಸಿದ್ಧಾಂತಗಳು ತಪ್ಪು ಎನ್ನುತ್ತೀರಿ. ಅವು ತಪ್ಪು ಎಂದು ನಂಬುತ್ತೀರಾದರೆ, ಸುಪ್ರೀ ಕೋರ್ಟ್‌ ಏನೂ ಮಾಡಲೂ ಸಾಧ್ಯವಿಲ್ಲ. ಇಲ್ಲಿ ವಿಧಿ 32 ಅನ್ವಯ ಮೂಲಭೂತ ಹಕ್ಕಿನ ಉಲ್ಲಂಘನೆಯ ಪ್ರಶ್ನೆ ಎಲ್ಲಿದೆ?” ಎಂದು ಪ್ರಶ್ನಿಸಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News