ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಆವರಣ ಸಮೀಕ್ಷೆ ಕೋರಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ
ಹೊಸದಿಲ್ಲಿ: ಕೃಷ್ಣ ಜನ್ಮಭೂಮಿ ಹಾಗೂ ಶಾಹಿ ಈದ್ಗಾದ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ಕೋರಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ಈ ವಿಷಯದ ಕುರಿತು ಅಲಹಾಬಾದ್ ಉಚ್ಚ ನ್ಯಾಯಾಲಯ ನಿರ್ಣಯ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಈ ವಿಷಯದ ಕುರಿತ ಮೊಕದ್ದಮೆಗಳ ವಿಚಾರಣೆಯನ್ನು ಉಚ್ಚ ನ್ಯಾಯಾಲಯ ಶುಕ್ರವಾರ ನಡೆಸಿತು.
‘‘ಈ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ನಮ್ಮ ಭಾವನೆ. ಅದಲ್ಲದೆ, ವಿವಿಧ ವಿಷಯಗಳು ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದೆ’’ ಎಂದು ಸಂಜಯ್ ಕಿಶನ್ ಕೌಲ್ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠ ಹೇಳಿದೆ.
ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದದ ಕುರಿತಂತೆ ಸುಮಾರು 10 ದಾವೆಗಳು ಸಲ್ಲಿಕೆಯಾಗಿವೆ ಎಂದು ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಎಲ್ಲ ದಾವೆಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ಉಚ್ಚ ನ್ಯಾಯಾಲಯ ಮೇ 26ರಂದು ನಿರ್ಧರಿಸಿತ್ತು. ದೇವರ ಪರವಾಗಿ ನ್ಯಾಯವಾದಿ ರಂಜನ ಅಗ್ನಿಹೋತ್ರಿ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ಈ ಆದೇಶ ನೀಡಿತ್ತು.
ಸಮೀಕ್ಷೆ ನಡೆಸುವಂತೆ ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಟ್ರಸ್ಟ್ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಗೌರವ್ ಭಾಟಿಯಾ, ಮಥುರಾ ನ್ಯಾಯಾಲಯ ಮಾರ್ಚ್ 31ರಂದು ಸಮೀಕ್ಷೆ ನಡೆಸುವಂತೆ ನಿರ್ದೇಶಿಸಲು ನಿರಾಕರಿಸಿತು ಎಂದು ತಿಳಿಸಿದರು.
ಅನಂತರ ನಾವು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆವು. ಆದರೆ, ನಮ್ಮ ಮೇಲ್ಮನವಿಯನ್ನು ಉಚ್ಚ ನ್ಯಾಯಾಲಯ ಜುಲೈ 10ರಂದು ತಿರಸ್ಕರಿಸಿತು. ಮಥುರಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಕಾನೂನು ಬಾಹಿರ ಅಂಶ ಕಂಡು ಬಂದಿಲ್ಲ ಎಂದು ಅದು ಹೇಳಿತ್ತು ಎಂದು ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.