‘ಹಮಾರೆ ಬಾರಾ’ ಚಿತ್ರದ ಬಿಡುಗಡೆಗೆ ಸುಪ್ರೀಂ ತಡೆ

Update: 2024-06-13 10:55 GMT

PhotoCredit: deccanherald.com

ಹೊಸದಿಲ್ಲಿ: ಇಸ್ಲಾಂ ನಂಬಿಕೆ ಹಾಗೂ ವಿವಾಹಿತ ಮುಸ್ಲಿಂ ಮಹಿಳೆಯರ ಕುರಿತು ನಿಂದನಾತ್ಮಕವಾಗಿದೆ ಎಂಬ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಜೂನ್ 14ರಂದು ಬಿಡುಗಡೆಯಾಗಬೇಕಿದ್ದ ಅನ್ನು ಕಪೂರ್ ಅವರ ‘ಹಮಾರೆ ಬಾರಾ’ ಚಿತ್ರ ಬಿಡುಗಡೆಗೆ ಗುರುವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಅರ್ಜಿದಾರರಾದ ಅಝರ್ ಬಾಷಾ ತಂಬೋಲಿ ಪರವಾಗಿ ಹಾಜರಿದ್ದ ವಕೀಲ ಫೌಝಿಯ ಶಕೀಲ್ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ಸಂದೀಪ್ ಮೆಹ್ತಾ ಅವರನ್ನೊಳಗೊಂಡ ರಜಾಪೀಠವು, ಈ ಅರ್ಜಿಯ ಕುರಿತು ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂದು ಬಾಂಬೆ ಹೈಕೋರ್ಟ್ ಗೆ ಸೂಚಿಸಿತು.

ಚಿತ್ರದ ಬಿಡುಗಡೆಗೆ ತಡೆ ನೀಡಿದ ನ್ಯಾಯಪೀಠವು, “ನಾವು ಬೆಳಗ್ಗೆ ಚಲನಚಿತ್ರದ ಟ್ರೈಲರ್ ಅನ್ನು ನೋಡಿದ್ದೇವೆ ಹಾಗೂ ಎಲ್ಲ ಅವಹೇಳನಕಾರಿ ಸಂಭಾಷಣೆಗಳು ಟ್ರೈಲರ್ ನಲ್ಲಿ ಮುಂದುವರಿದಿವೆ” ಎಂದು ಅಭಿಪ್ರಾಯ ಪಟ್ಟಿತು. ಇದರೊಂದಿಗೆ, ಈ ಸಂಬಂಧ ಬಾಂಬೆ ಹೈಕೋರ್ಟ್ ನಲ್ಲಿ ದಾಖಲಾಗಿರುವ ಅರ್ಜಿ ವಿಲೇವಾರಿಯಾಗುವವರೆಗೂ, ಚಿತ್ರದ ಬಿಡುಗಡೆಗೆ ತಡೆ ನೀಡಿತು.

ಈ ವೇಳೆ, ಅಕಾರಣ ಆದೇಶದ ಮೇರೆಗೆ ಚಿತ್ರದ ಬಿಡುಗಡೆಯ ಮೇಲಿದ್ದ ತಡೆಯನ್ನು ಹೈಕೋರ್ಟ್ ತೆರವುಗೊಳಿಸಿದೆ ಎಂಬ ಸಂಗತಿಯನ್ನು ವಕೀಲ ಫೌಝಿಯ ಶಕೀಲ್ ಸುಪ್ರೀಂ ಕೋರ್ಟ್ ನ ಗಮನಕ್ಕೆ ತಂದರು.

ಕರ್ನಾಟಕದಲ್ಲಿ ಈಗಾಗಲೇ ನಿಷೇಧಕ್ಕೊಳಗಾಗಿರುವ ‘ಹಮಾರೆ ಬಾರಾ’ ಚಲನಚಿತ್ರವು ದೇಶಾದ್ಯಂತ ಜೂನ್ 14ರಂದು ಬಿಡುಗಡೆಯಾಗಬೇಕಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News