ಪ್ರಧಾನಿ ಮೋದಿ ಪದವಿ ವಿವಾದ: ಮಾನನಷ್ಟ ಪ್ರಕರಣದಲ್ಲಿ ಕೇಜ್ರಿವಾಲ್ ವಿರುದ್ಧ ಸಮನ್ಸ್ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಕುರಿತು ಟೀಕೆಗಳಿಗಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯವು ದಾಖಲಿಸಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್‌ಗೆ ಹೊರಡಿಸಿರುವ ಸಮನ್ಸ್ ಅನ್ನು ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ನಿರಾಕರಿರಿಸಿದೆ.
‘ಆಪ್ ಶಾಸಕ ಸಂಜಯ್ ಸಿಂಗ್ ಸಲ್ಲಿಸಿದ್ದ ಇಂತಹುದೇ ಅರ್ಜಿಯನ್ನು ನ್ಯಾಯಾಲಯವು ಈ ಹಿಂದೆ ವಜಾಗೊಳಿಸಿದೆ. ಪ್ರಸಕ್ತ ಅರ್ಜಿಯಲ್ಲೂ ಮಧ್ಯಪ್ರವೇಶಿಸಲು ನಾವು ಇಚ್ಛಿಸುವುದಿಲ್ಲ’ ಎಂದು ನ್ಯಾಯಮೂರ್ತಿಗಳಾದ ಹೃಷಿಕೇಶ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಹೇಳಿತು.
ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿಯವರು,ಸಿಂಗ್ ನೀಡಿದ್ದ ಹೇಳಿಕೆಗಳು ವಿಭಿನ್ನವಾಗಿದ್ದವು ಎಂದು ವಾದಿಸಿದರಾದರೂ ಅರ್ಜಿಯನ್ನು ಪುರಸ್ಕರಿಸಲು ಪೀಠವು ನಿರಾಕರಿಸಿತು.
ಮೋದಿಯವರ ಶೈಕ್ಷಣಿಕ ಪದವಿಗಳ ಕುರಿತು ಟೀಕೆಗಳಿಗೆ ಸಂಬಂಧಿಸಿದಂತೆ ಗುಜರಾತ್ ವಿವಿಯು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿವಾಲ್‌ಗೆ ಹೊರಡಿಸಿದ್ದ ಸಮನ್ಸನ್ನು ರದ್ದುಗೊಳಿಸಲು ಗುಜರಾತ್ ಉಚ್ಚ ನ್ಯಾಯಾಲಯವು ಫೆಬ್ರವರಿಯಲ್ಲಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಕೇಜ್ರಿವಾಲ್ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು.