ʼಲೈಂಗಿಕ ಕಾರ್ಯಕರ್ತೆ ’ಪದ ಬದಲಾವಣೆಗೆ ಸುಪ್ರೀಂ ನಿರ್ಧಾರ

Update: 2023-11-11 16:36 GMT

Photo- PTI

ಹೊಸದಿಲ್ಲಿ: ‘ಜೆಂಡರ್ ಸ್ಟೀರಿಯೊಟೈಪ್ (ಪುರುಷರು ಅಥವಾ ಮಹಿಳೆಯರ ಕುರಿತು ಸಾರ್ವತ್ರಿಕ ಗ್ರಹಿಕೆ)’ ಕುರಿತು ತನ್ನ ಕೈಪಿಡಿಯಲ್ಲಿನ ‘ಲೈಂಗಿಕ ಕಾರ್ಯಕರ್ತೆ ’ಪದವನ್ನು ಬದಲಿಸಲು ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದೆ. ಲೈಂಗಿಕ ಕಾರ್ಯಕರ್ತೆ ಪದವು ಇಂತಹ ಸಾರ್ವತ್ರಿಕ ಗ್ರಹಿಕೆಯನ್ನು ಉತ್ತೇಜಿಸುತ್ತದೆ ಎಂದು ಮಾನವ ಕಳ್ಳಸಾಗಾಣಿಕೆ ವಿರೋಧಿ ಎನ್‌ಜಿಒಗಳ ಗುಂಪೊಂದು ಕಳವಳ ವ್ಯಕ್ತಪಡಿಸಿದ ಬಳಿಕ ನ್ಯಾಯಾಲಯವು ಈ ಬದಲಾವಣೆಗೆ ಮುಂದಾಗಿದೆ.

ತನ್ನ ಕೈಪಿಡಿಯಲ್ಲಿ ‘ಲೈಂಗಿಕ ಕಾರ್ಯಕರ್ತೆ’ ಬದಲು ಮಾನವ ಕಳ್ಳಸಾಗಾಣಿಕೆಯ ಬಲಿಪಶು/ವಾಣಿಜ್ಯ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಹಿಳೆ ಅಥವಾ ಬಲವಂತದಿಂದ ವಾಣಿಜ್ಯ ಲೈಂಗಿಕ ಶೋಷಣೆಗೊಳಪಟ್ಟ ಮಹಿಳೆ ಎಂಬ ಪದಗಳನ್ನು ಸೇರಿಸಲು ಸರ್ವೋಚ್ಚ ನ್ಯಾಯಾಲಯವು ನಿರ್ಧರಿಸಿದೆ.

ವೇಶ್ಯೆ, ಬೆಲೆವೆಣ್ಣುಗಳಂತಹ ಪದಗಳ ಬದಲಿಗೆ ಲೈಂಗಿಕ ಕಾರ್ಯಕರ್ತೆ ಪದದ ಬಳಕೆಯು ವಾಡಿಕೆಯಲ್ಲಿರುವ, ಸ್ವೀಕಾರಾರ್ಹವಲ್ಲದ ಲಿಂಗಸೂಚಕ ಪದಗಳ ಇನ್ನೊಂದು ಗುಚ್ಛಕ್ಕೆ ಕಾರಣವಾಗುತ್ತದೆ. ಹೀಗಾಗಿ ಅದನ್ನು ಮರುಪರಿಶೀಲಿಸುವಂತೆ ಆಗ್ರಹಿಸಿ ಎನ್‌ಜಿಒಗಳು ಮಾನವ ಕಳ್ಳಸಾಗಾಣಿಕೆ ವಿರೋಧಿ ವೇದಿಕೆಯ ಆಶ್ರಯದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಆಗ್ರಹಿಸಿದ್ದವು. ಗೋವಾದ ‘ಅನ್ಯಾಯ ರಹಿತ ಜಿಂದಗಿ (ಎಆರ್‌ಝಡ್)’,ಮುಂಬೈನ ‘ಪ್ರಯಾಸ್ ’ ಇತ್ಯಾದಿಗಳು ಈ ಎನ್‌ಜಿಒಗಳಲ್ಲಿ ಸೇರಿವೆ.

ಮುಖ್ಯ ನ್ಯಾಯಮೂರ್ತಿಗಳು ಪದ ಬದಲಾವಣೆಗೆ ಒಪ್ಪಿಕೊಂಡಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯದ ಡೆಪ್ಯೂಟಿ ರಿಜಿಸ್ಟ್ರಾರ್ ಅನುರಾಗ್ ಭಾಸ್ಕರ್ ಅವರು ಶುಕ್ರವಾರ ಇ-ಮೇಲ್ ಮೂಲಕ ಎಆರ್‌ಝಡ್‌ಗೆ ತಿಳಿಸಿದ್ದಾರೆ.

ಹೆಚ್ಚಿನ ಮಹಿಳೆಯರು ಬಲವಂತ, ಅಪಹರಣ, ಆಮಿಷ ಮತ್ತು ಮಾನವ ಕಳ್ಳಸಾಗಾಣಿಕೆಯ ಮೂಲಕ ವಾಣಿಜ್ಯ ಲೈಂಗಿಕ ಶೋಷಣೆಗೆ ಬಲಿಯಾಗುತ್ತಾರೆ.ಲೈಂಗಿಕ ಕಾರ್ಯಕರ್ತೆಯಂತಹ ಸಾಮಾನ್ಯ ಪದದ ಬಳಕೆಯು ವಾಣಿಜ್ಯ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಎಲ್ಲ ಮಹಿಳೆಯರು ಮುಕ್ತ ಮತ್ತು ಸ್ವಂತ ಆಯ್ಕೆಯಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಭಾವಿಸುವಂತೆ ಮಾಡಬಹುದು. ಹೆಚ್ಚಿನ ಮಹಿಳೆಯರು ಬಲವಂತ ಅಥವಾ ಮೋಸದಿಂದಾಗಿ ಈ ವೃತ್ತಿಗೆ ತಳ್ಳಲ್ಪಡುತ್ತಿದ್ದಾರೆ ಎಂಬ ವಾಸ್ತವವನ್ನು ಇದು ಮರೆಮಾಚುತ್ತದೆ. ಅನೇಕರು ಪರ್ಯಾಯ ಮಾರ್ಗಗಳಿಲ್ಲದೆ ಈ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಎನ್‌ಜಿಒಗಳು ತಮ್ಮ ಪತ್ರದಲ್ಲಿ ಹೇಳಿದ್ದವು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News