ಮಕ್ಕಳ ಅಶ್ಲೀಲ ವೀಡಿಯೊ ವಿರುದ್ಧ ಕ್ರಮ ಕೈಗೊಳ್ಳಿ: ತಂತ್ರಜ್ಞಾನ ದೈತ್ಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ಹೊಸದಿಲ್ಲಿ: ಆನ್ ಲೈನ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೊಗಳ ಲಭ್ಯತೆಯ ಮೇಲೆ ದಾಳಿ ನಡೆಸಿರುವ ಕೇಂದ್ರ ಸರ್ಕಾರವು, ಈ ವಿಷಯದ ಕುರಿತು ಯಾವುದೇ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಿ ಇಲ್ಲವೆ ಕಾನೂನು ರಕ್ಷಣೆಯನ್ನು ಕಳೆದುಕೊಳ್ಳಿ ಎಂದು x, ಯೂಟ್ಯೂಬ್ ಹಾಗೂ ಟೆಲಿಗ್ರಾಮ್ ಸಾಮಾಜಿಕ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ. ಇಂತಹ ವಿಷಯಗಳನ್ನು ಶಾಶ್ವತವಾಗಿ ತೆಗೆದು ಹಾಕಿ ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸಿ ಎಂದೂ ಈ ವೇದಿಕೆಗಳಿಗೆ ತಾಕೀತು ಮಾಡಿದೆ ಎಂದು ndtv.com ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, “ನಾವು ಎಕ್ಸ್, ಯೂಟ್ಯೂಬ್ ಹಾಗೂ ಟೆಲಿಗ್ರಾಮ್ ಸಾಮಾಜಿಕ ಮಾಧ್ಯಮಗಳಿಗೆ ನೋಟೀಸ್ ಜಾರಿಗೊಳಿಸಿದ್ದು, ಅವುಗಳ ವೇದಿಕೆಯಲ್ಲಿ ಯಾವುದೇ ಮಕ್ಕಳ ಲೈಂಗಿಕ ದೌರ್ಜನ್ಯ ವಸ್ತುಗಳು (ಸಿಎಸ್‍ಎಎಂ) ಇರದಿರುವುದನ್ನು ಖಾತ್ರಿಗೊಳಿಸಬೇಕು ಎಂದು ಸೂಚಿಸಲಾಗಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳಡಿ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಅಂತರ್ಜಾಲವನ್ನು ನಿರ್ಮಿಸಲು ಸರ್ಕಾರವು ದೃಢ ನಿಶ್ಚಯ ಮಾಡಿದೆ” ಎಂದು ತಿಳಿಸಿದ್ದಾರೆ.
ಈ ಸಾಮಾಜಿಕ ಮಾಧ್ಯಮಗಳಿಗೆ ತೀಕ್ಷ್ಣ ಎಚ್ಚರಿಕೆ ನೀಡಿರುವ ಸಚಿವರು, “ಮಾಹಿತಿ ತಂತ್ರಜ್ಞಾನ ಕಾಯ್ದೆಯ ಮಾಹಿತಿ ತಂತ್ರಜ್ಞಾನ ನಿಯಮಗಳಡಿ, ಸಾಮಾಜಿಕ ಮಾಧ್ಯಮ ಮಧ್ಯಸ್ಥ ಕಂಪನಿಗಳು ತಮ್ಮ ವೇದಿಕೆಗಳಲ್ಲಿ ಅಪರಾಧ ಅಥವಾ ಹಾನಿಕಾರಕ ಪೋಸ್ಟ್ ಗಳಿಗೆ ಅವಕಾಶ ನೀಡಬಾರದು. ಅವರು ಕ್ಷಿಪ್ರವಾಗಿ ಕಾರ್ಯಪ್ರವೃತ್ತವಾಗದಿದ್ದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿ ನೀಡಲಾಗಿರುವ ಸುರಕ್ಷತೆಯನ್ನು ಹಿಂಪಡೆಯಲಾಗುವುದು ಹಾಗೂ ಭಾರತೀಯ ಕಾನೂನುಗಳಡಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಅಡಿ ಒದಗಿಸಲಾಗಿರುವ ಸುರಕ್ಷತೆಯ ಪ್ರಕಾರ, ಸಾಮಾಜಿಕ ಮಾಧ್ಯಮಗಳಲ್ಲಿ ಅವುಗಳ ಬಳಕೆದಾರರಿಂದ ಹಂಚಿಕೆಯಾಗುವ ಯಾವುದೇ ಬಗೆಯ ವಿಷಯಗಳಿಂದ ಅವುಗಳಿಗೆ ಕಾನೂನು ರಕ್ಷಣೆಯನ್ನು ಒದಗಿಸಲಾಗಿದೆ.