ಯಾರೇ ಆಗಲಿ ದ್ವೇಷ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಅಲ್ಲಲ್ಲಿ ದ್ವೇಷ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ರಾಜ್ಯಾದ್ಯಂತ ದ್ವೇಷ ಭಾಷಣವನ್ನು ನಿಗ್ರಹಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಗಳ ಗುಚ್ಚದ ಸಂಕ್ಷಿಪ್ತ ವಿಚಾರಣೆ ನಡೆಸಿದ ಸಂದರ್ಭ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಎಸ್ವಿಎನ್ ಭತ್ತಿ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಈ ಮನವಿಗಳ ಗುಚ್ಛದಲ್ಲಿ ಗುರುಗ್ರಾಮದ ನೂಹ್ ನಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರ ಬಳಿಕ ಮುಸ್ಲಿಮರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ ಸಂಘ ಪರಿವಾರದ ಸಂಘಟನೆಗಳ ವಿರುದ್ಧದ ಮನವಿ ಕೂಡ ಸೇರಿತ್ತು. ಕೇರಳದ ರಾಜಕೀಯ ಪಕ್ಷವಾದ ಇಂಡಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ರಾಜ್ಯದಲ್ಲಿ ಜುಲೈಯಲ್ಲಿ ಆಯೋಜಿಸಿದ್ದ ರ್ಯಾಲಿಯ ಸಂದರ್ಭ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿತ್ತು ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
‘‘ನಾವು ತುಂಬಾ ಸ್ಪಷ್ಟ ಇದ್ದೇವೆ. ಆ ಕಡೆಯಾಗಲಿ, ಈ ಕಡೆಯಾಗಲಿ, ದ್ವೇಷ ಭಾಷಣ ಮಾಡುವವರನ್ನು ಒಂದೇ ರೀತಿಯಾಗಿ ನಡೆಸಿಕೊಳ್ಳಬೇಕು. ಕಾನೂನು ಅದರದ್ದೇ ಆದ ಕ್ರಮ ತೆಗೆದುಕೊಳ್ಳುತ್ತದೆ. ದ್ವೇಷ ಭಾಷಣ ಯಾರೇ ಮಾಡಿದರೂ ಅವರ ವಿರುದ್ಧ ಕಾನೂನಿಗೆ ಅನುಗುಣವಾಗಿ ಕ್ರಮ ತೆಗೆದುಕೊಳ್ಳಬೇಕು. ಈ ಅಭಿಪ್ರಾಯವನ್ನು ನಾವು ಈಗಾಗಲೇ ವ್ಯಕ್ತಪಡಿಸಿದ್ದೇವೆ’’ ಎಂದು ನ್ಯಾಯಾಲಯ ಹೇಳಿತು.