ಮುಂಬೈನಲ್ಲಿ ತಾಲೀಬಾನ್ ಪ್ರಭಾರ ರಾಯಭಾರಿ ನೇಮಕ: ಸರ್ಕಾರ ಮೌನ

Update: 2024-11-13 12:08 GMT

ಹೊಸದಿಲ್ಲಿ: ಮುಂಬೈ ಅಫ್ಘಾನಿಸ್ತಾನ ಮಿಷನ್‍ನಲ್ಲಿ ಪ್ರಭಾರಿ ಕಾನ್ಸುಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದ್ದು, ಈ ಬೆಳವಣಿಗೆ ಬಗ್ಗೆ ಭಾರತ ಸರ್ಕಾರ ಇದುವರೆಗೆ ಯಾವುದೇ ದೃಢೀಕರಣ ನೀಡಿಲ್ಲ.

ತಾಲಿಬಾಬ್ ಸರ್ಕಾರವನ್ನು ಭಾರತ ಅಧಿಕೃತವಾಗಿ ಮಾನ್ಯ ಮಾಡಿಲ್ಲವಾದ್ದರಿಂದ ಈ ಮೊದಲು ಅಫ್ಘಾನ್ ಮಿಷನ್‍ನ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡುವ ತಾಲಿಬಾನ್ ಪ್ರಯತ್ನ ವಿಫಲವಾಗಿತ್ತು. ಆದಾಗ್ಯೂ ಭಾರತ ಮಾನವೀಯ ವಿಚಾರಗಳಲ್ಲಿ ತಾಲಿಬಾನ್ ಅಧಿಕಾರಿಗಳ ಜತೆ ನಿಕಟವಾಗಿ ವ್ಯವಹರಿಸುತ್ತಿದೆ ಹಾಗೂ ಅಫ್ಘಾನಿಸ್ತಾನದ ರಾಜಭಾರ ಕಚೇರಿಯನ್ನು ಮುಕ್ತವಾಗಿ ಇರಿಸಿದೆ.

ಅಫ್ಘಾನಿಸ್ತಾನದ ಉಪ ವಿದೇಶಾಂಗ ಸಚಿವ ಮೊಹ್ಮದ್ ಸ್ತಾನಿಕಾಝಿ ಅವರು ಮುಂಬೈನ ಪ್ರಭಾನಿ ಕಾನ್ಸುಲ್ ಆಗಿ ಇಕ್ರಮುದ್ದೀನ್ ಕಮೀಲ್ ಅವರನ್ನು ನೇಮಕ ಮಾಡಿದೆ ಎಂದು ಅಫ್ಘಾನ್ ಮಾಧ್ಯಮಗಳು ವರದಿ ಮಾಡಿವೆ. ಕಮೀಲ್ ಹಾಲಿ ಮುಂಬೈನಲ್ಲಿದ್ದು, ಅವರು ಮುಂಬೈನಲ್ಲಿ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ರಾಯಭಾರಿ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾರೆ ಎಂದು ವರದಿಗಳು ಸ್ಪಷ್ಟಪಡಿಸಿವೆ. ಆದರೆ ಈ ಬಗ್ಗೆ ಭಾರತ ಸರ್ಕಾರ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ತಾಲಿಬಾನ್ ಸರ್ಕಾರವನ್ನು ಮಾನ್ಯ ಮಾಡುವ ನಿಟ್ಟಿನಲ್ಲಿ ಕೈಗೊಂಡ ಹೆಜ್ಜೆ ಎಂದು ವಿಶ್ಲೇಷಿಸುವಂತಿಲ್ಲ ಎಂದು ಭಾರತೀಯ ಮೂಲಗಳು ಪ್ರತಿಪಾದಿಸಿವೆ.

2023ರ ಮೇ ತಿಂಗಳಲ್ಲಿ ತಾಲಿಬಾನ್ ಸರ್ಕಾರ ಹೊಸದಿಲ್ಲಿಯಲ್ಲಿ ಅಫ್ಘಾನ್ ರಾಯಭಾರ ಕಚೇರಿಯ ಮುಖ್ಯಸ್ಥರನ್ನು ನೇಮಕ ಮಾಡುವ ಪ್ರಯತ್ನ ಮಾಡಿತ್ತು. ಅದರೆ ಅಫ್ಘಾನ್ ರಾಯಭಾರಿ ಫರೀದ್ ಮಮುಂಡ್ಸಿ ಇದನ್ನು ತಿರಸ್ಕರಿಸಿದ್ದರು. ಫರೀದ್ ಅವರನ್ನು ಈ ಮೊದಲು ಘನಿ ಆಡಳಿತ ನೇಮಕ ಮಾಡಿತ್ತು. ಆದರೆ ಫರೀದ್ ಹಾಗೂ ಇತರರು ಸದ್ಯಕ್ಕೆ ಅಫ್ಘಾನ್ ಮಿಷನ್‍ನ ಭಾಗವಾಗಿ ಉಳಿದಿಲ್ಲ.

ಅಂತರರಾಷ್ಟ್ರೀಯ ಕಾನೂನಿನಲ್ಲಿ ಪಿಎಚ್‍ಡಿ ಪದವಿ ಪಡೆದಿರು ಜಮಿಲ್, ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಭದ್ರತಾ ಸಹಕಾರ ಮತ್ತು ಗಡಿ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾಗಿ ಈ ಮುನ್ನ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News