ತಮಿಳುನಾಡು : ಮಹಿಳಾ ಪತ್ರಕರ್ತೆ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಬಿಜೆಪಿ ನಾಯಕನಿಗೆ ಒಂದು ತಿಂಗಳ ಸೆರೆವಾಸದ ಶಿಕ್ಷೆ

Update: 2024-02-19 16:02 GMT

ಎಸ್.ವೆ.ಶೇಖರ್ | PC: PuthuYugamTV/via Youtube.com

ಚೆನ್ನೈ: ಮಹಿಳಾ ಪತ್ರಕರ್ತೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ತಮಿಳುನಾಡಿನ ಹಿರಿಯ ಬಿಜೆಪಿ ನಾಯಕ ಎಸ್.ವೆ.ಶೇಖರ್ ಅವರಿಗೆ ಒಂದು ತಿಂಗಳ ಸೆರೆವಾಸ ಹಾಗೂ ರೂ. 15,000 ದಂಡವನ್ನು ಚೆನ್ನೈನ ನ್ಯಾಯಾಲಯವೊಂದು ವಿಧಿಸಿದೆ. ಈ ಪ್ರಕರಣವು 2018ರಲ್ಲಿ ಮಹಿಳಾ ಪತ್ರಕರ್ತೆಯರ ವಿರುದ್ಧ ಶೇಖರ್ ಆಕ್ಷೇಪಾರ್ಹ ಸಾಮಾಜಿಕ ಪೋಸ್ಟ್ ಮಾಡಿದ್ದರು ಎಂಬ ಆರೋಪದ ಕುರಿತಾಗಿದೆ.

ಈ ಪ್ರಕರಣದ ಕುರಿತು ತೀರ್ಪು ನೀಡಿದ ಚೆನ್ನೈನ ವಿಶೇಷ ನ್ಯಾಯಾಲಯದ ನ್ಯಾ‌ ಜಿ.ಜಯವೇಲ್, ಈ ಅಪರಾಧವು ಸಂಶಯಕ್ಕೆಡೆ ಇಲ್ಲದಂತೆ ಸಾಬೀತಾಗಿದೆ. ಮಹಿಳಾ ಪತ್ರಕರ್ತೆಯರ ವಿರುದ್ಧ ಮಾಡಿರುವ ಪೋಸ್ಟ್ ಅವಹೇಳನಾಕಾರಿ ಹಾಗೂ ನಿಂದನಾತ್ಮಕ ಪ್ರತಿಕ್ರಿಯೆಗಳನ್ನು ಒಳಗೊಂಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದ್ದು, ಇದು ಕಾನೂನಾತ್ಮಕ ಕ್ರಮಗಳನ್ನು ಆಹ್ವಾನಿಸುತ್ತದೆ ಎಂದು ಹೇಳಿದ್ದಾರೆ.

ಎಪ್ರಿಲ್ 2018ರಲ್ಲಿ ತಮಿಳುನಾಡು ರಾಜ್ಯಪಾಲರಾಗಿದ್ದ ಭನ್ವರಿಲಾಲ್ ಪುರೋಹಿತ್ ಮಹಿಳಾ ಪತ್ರಕರ್ತೆಯೊಬ್ಬರ ಗಲ್ಲವನ್ನು ಚಿವುಟಿ, ನಂತರ ಕ್ಷಮಾಪಣೆ ಕೋರಿದ್ದರು. ಆದರೆ, ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಶೇಖರ್, ಮಹಿಳಾ ಪತ್ರಕರ್ತೆಯರ ವಿರುದ್ಧ ಅವಹೇಳನಾಕಾರಿ ಮತ್ತು ನಿಂದನಾತ್ಮಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದರು. ಇದರ ವಿರುದ್ಧ ತಮಿಳುನಾಡು ಪತ್ರಕರ್ತರ ಹಿತರಕ್ಷಣಾ ಕಲ್ಯಾಣ ಸಂಘವು ನೀಡಿದ ದೂರನ್ನು ಆಧರಿಸಿ ಪೊಲೀಸರು ಶೇಖರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News