ತಮಿಳುನಾಡು: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡನ ಮೃತದೇಹ ಸುಟ್ಟಸ್ಥಿತಿಯಲ್ಲಿ ಪತ್ತೆ
ಚೆನ್ನೈ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ತಮಿಳುನಾಡಿನ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಒಡೆತನದ ಜಮೀನಿನಲ್ಲೇ ಮೃತದೇಹ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ.
ಸಾವಿನ ಕುರಿತು ತನಿಖೆ ನಡೆಸಲು ಮೂರು ವಿಶೇಷ ತಂಡಗಳನ್ನು ರಚಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
ಕಾಂಗ್ರೆಸ್‌ನ ತಿರುನಲ್ವೇಲಿ ಪೂರ್ವ ಜಿಲ್ಲಾ ಘಟಕದ ಅಧ್ಯಕ್ಷ ಕೆಪಿಕೆ ಜಯಕುಮಾರ್ ಮೃತದೇಹ ಶನಿವಾರ ತಿರುನಲ್ವೇಲಿಯಲ್ಲಿ ಪತ್ತೆಯಾಗಿದೆ.
ಜಯಕುಮಾರ್ ಗುರುವಾರ ನಾಪತ್ತೆಯಾಗಿದ್ದು, ಮರುದಿನ ಅವರ ಪುತ್ರ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ, ವ್ಯಕ್ತಿಯ ಆತ್ಮಹತ್ಯಾ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದನ್ನು ಅವರೇ ಬರೆದಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಯಕುಮಾರ್ ಅವರನ್ನು ಕೊಲೆ ಮಾಡಲಾಗಿದೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.