ಮಧ್ಯಪ್ರದೇಶ | ಪರೀಕ್ಷೆಯಲ್ಲಿ ವಂಚನೆಗೆ ಶಿಕ್ಷಕಿಯಿಂದಲೇ ವಿದ್ಯಾರ್ಥಿಗಳಿಗೆ ಸಹಾಯ : ವೀಡಿಯೊ ವೈರಲ್ ಬಳಿಕ ಅಮಾನತು

Photo | indiatoday
ಭೋಪಾಲ್ : ಪರೀಕ್ಷೆ ವೇಳೆ ಶಿಕ್ಷಕಿಯೋರ್ವರು ವಿದ್ಯಾರ್ಥಿಗಳಿಗೆ ಕಪ್ಪು ಹಲಗೆಯಲ್ಲಿ ಉತ್ತರವನ್ನು ಬರೆದುಕೊಟ್ಟು ನಕಲು ಮಾಡಲು ಸಹಾಯ ಮಾಡಿದ್ದು, ಈ ಕುರಿತ ವೀಡಿಯೊ ವೈರಲ್ ಆಗುತ್ತಿದ್ದಂತೆ ಆರೋಪಿತ ಶಿಕ್ಷಕಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.
ಫೆಬ್ರವರಿ 25ರಂದು ಬೇತುಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ವೀಡಿಯೊದಲ್ಲಿ, ಪರೀಕ್ಷೆಯ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕಿ ಸಂಗೀತಾ ವಿದ್ಯಾರ್ಥಿಗಳಿಗೆ ಕಪ್ಪು ಹಲಗೆಯಲ್ಲಿ ಗಣಿತಶಾಸ್ತ್ರದ ಪ್ರಶ್ನೆ ಪತ್ರಿಕೆಗೆ ಉತ್ತರಗಳನ್ನು ಬರೆದು ನಕಲು ಮಾಡಲು ಸಹಾಯ ಮಾಡುತ್ತಿರುವುದು ಕಂಡು ಬಂದಿದೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೀಡಿಯೊವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬೇತುಲ್ ಜಿಲ್ಲಾಧಿಕಾರಿ ನರೇಂದ್ರ ಕುಮಾರ್ ಸೂರ್ಯವಂಶಿ ಅವರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತುರ್ತು ತನಿಖೆಗೆ ಆದೇಶಿಸಿದ್ದಾರೆ.
ಶಿಕ್ಷಕಿಯನ್ನು ಪರೀಕ್ಷೆ ವೇಳೆ ಮೇಲ್ವಿಚಾರಕಿಯನ್ನಾಗಿ ನೇಮಿಸಲಾಗಿತ್ತು. ಆದರೆ ಆಕೆ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.