ತೆಲಂಗಾಣ| ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಈಗ ದಿನಗೂಲಿ ಕಾರ್ಮಿಕ

Update: 2024-05-05 17:53 GMT

ದರ್ಶನಂ ಮೊಗುಲಯ್ಯ | PC : PTI 

ಹೈದರಾಬಾದ್ : ಎರಡು ವರ್ಷಗಳ ಹಿಂದೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಜೊತೆ ರಾಜ್ಯ ಸರಕಾರದಿಂದ ಒಂದು ಕೋಟಿ ರೂ.ಗಳ ಗೌರವ ಧನವನ್ನೂ ಪಡೆದಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗುಲಯ್ಯ (73) ಈಗ ತುತ್ತಿನ ಚೀಲ ತುಂಬಿಸಲು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಅಪರೂಪದ ಸಂಗೀತ ಉಪಕರಣ ‘ಕಿನ್ನರ’ವನ್ನು ನುಡಿಸುವ ಮೂಲಕ ಜನಪ್ರಿಯರಾಗಿರುವ ಮೊಗುಲಯ್ಯ ಎರಡು ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು, ತೆಲಂಗಾಣದಲ್ಲಿಯ ಆಗಿನ ಬಿ ಆರ್‌ ಎಸ್‌ ಸರಕಾರವು ಅವರಿಗೆ ಒಂದು ಕೋಟಿ ರೂ.ಗೌರವ ಧನವನ್ನು ನೀಡಿತ್ತು. ಮೊಗುಲಯ್ಯ ಈ ಹಣವನ್ನು ವಿವಿಧ ಕೌಟುಂಬಿಕ ಅಗತ್ಯಗಳಿಗಾಗಿ ವ್ಯಯಿಸಿದ್ದರು.

ಒಂಭತ್ತು ಮಕ್ಕಳ ತಂದೆ ಮೊಗುಲಯ್ಯ ಈ ಹಣದಲ್ಲಿ ತನ್ನಿಬ್ಬರು ಮಕ್ಕಳ ಮದುವೆಗಳನ್ನು ಮಾಡಿದ್ದರು ಮತ್ತು ನಿವೇಶನವೊಂದನ್ನು ಖರೀದಿಸಿ ಮೂರು ಅಂತಸ್ತುಗಳ ಮನೆಯ ನಿರ್ಮಾಣವನ್ನು ಆರಂಭಿಸಿದ್ದರು. ಆದರೆ ಕೈಯಲ್ಲಿದ್ದ ಹಣ ಖಾಲಿಯಾದ ಕಾರಣ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ಒಂಭತ್ತು ಮಕ್ಕಳ ಪೈಕಿ ಮೂವರು ಮೃತಪಟ್ಟಿದ್ದಾರೆ. ಓರ್ವ ಮಗ ಅನಾರೋಗ್ಯದಿಂದ ನರಳುತ್ತಿದ್ದು, ಆತನಿಗೆ ಚಿಕಿತ್ಸೆ ಕೊಡಿಸಲು ಮೊಗುಲಯ್ಯ ಪರದಾಡುತ್ತಿದ್ದಾರೆ. ಸ್ವತಃ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಮೊಗುಲಯ್ಯಗೆ ತನ್ನ ಮತ್ತು ತನ್ನ ಮಗನ ಔಷಧಿಗಾಗಿ ಪ್ರತಿ ತಿಂಗಳು 20,000 ರೂ.ಗಳ ಅಗತ್ಯವಿದೆ. ರಾಜ್ಯ ಸರಕಾರವು 10,000 ರೂ.ಗಳ ಮಾಸಾಶನವನ್ನು ನೀಡುತ್ತಿದೆಯಾದರೂ ಅದು ಕುಟುಂಬ ಪೋಷಣೆಗೆ ಸಾಲುತ್ತಿಲ್ಲ.

ರವಿವಾರ ಮೊಗುಲಯ್ಯರನ್ನು ಭೇಟಿಯಾದ ಬಿ ಆರ್‌ ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಆರ್ಥಿಕ ನೆರವನ್ನು ನೀಡಿದ್ದಾರೆ ಎಂದು ರಾವ್ ಕಚೇರಿಯು ತಿಳಿಸಿದೆ. ಮಾಧ್ಯಮ ವರದಿಗಳ ಮೂಲಕ ಮೊಗುಲಯ್ಯ ಅವರ ಬವಣೆಯನ್ನು ತಿಳಿದುಕೊಂಡಿದ್ದ ಮತ್ತು ಅಂತರ್ಜಾಲದಲ್ಲಿ ಹರಿದಾಡುತ್ತಿದ್ದ ಅವರು ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿರುವ ವೀಡಿಯೊವನ್ನು ನೋಡಿದ್ದ ರಾವ್ ಅವರಿಗೆ ಆರ್ಥಿಕ ನೆರವಿನ ಭರವಸೆ ನೀಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News