ತೆಲಂಗಾಣ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಬಡವರಿಗೆ ಆರೋಗ್ಯ ವಿಮೆ ಯೋಜನೆಗಳಿಗೆ ಚಾಲನೆ

Update: 2023-12-09 14:51 GMT

ಎ.ರೇವಂತ್‌ ರೆಡ್ಡಿ | Photo: X

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್‌ ರೆಡ್ಡಿಯವರು ಶನಿವಾರ ಕರ್ನಾಟಕದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳ ಮಾದರಿಯಲ್ಲಿ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಬಡವರಿಗೆ 10 ಲಕ್ಷ ರೂ.ಗಳ ಆರೋಗ್ಯ ವಿಮೆ ಯೋಜನೆಗಳಿಗೆ ಚಾಲನೆಯನ್ನು ನೀಡಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜನ್ಮದಿನದಂದೇ ಈ ಯೋಜನೆಗಳು ಆರಂಭಗೊಂಡಿವೆ.

ವಿಧಾನಸಭೆಯ ಆವರಣದಲ್ಲಿ ಯೋಜನೆಗಳಿಗೆ ಚಾಲನೆ ನೀಡಿದ ರೆಡ್ಡಿ, ಸೋನಿಯಾ ಗಾಂಧಿಯವರು ತೆಲಂಗಾಣ ರಾಜ್ಯ ರಚನೆಯ ತನ್ನ ಭರವಸೆಯನ್ನು ಈಡೇರಿಸಿದ ರೀತಿಯಲ್ಲೇ ಕಾಂಗ್ರೆಸ್ ಸರಕಾರವು ಆರು ಚುನಾವಣಾ ಗ್ಯಾರಂಟಿಗಳನ್ನು ನೂರು ದಿನಗಳಲ್ಲಿ ಜಾರಿಗೊಳಿಸುವ ಮೂಲಕ ತೆಲಂಗಾಣದ ಜನತೆಯ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಹೇಳಿದರು.

2009ರಂದು ಆಗಿನ ಯುಪಿಎ ಸರಕಾರವು ತೆಲಂಗಾಣ ರಾಜ್ಯ ರಚನೆಯನ್ನು ಘೋಷಿಸಿತ್ತು, ಹೀಗಾಗಿ ಡಿ.9 ತೆಲಂಗಾಣಕ್ಕೆ ಉತ್ಸವದ ದಿನವಾಗಿದೆ ಎಂದರು. ರಾಜೀವ್ ಗಾಂಧಿ ಆರೋಗ್ಯಶ್ರೀ ಯೋಜನೆಯಡಿ ಬಡವರಿಗೆ 10 ಲಕ್ಷ ರೂ.ಗಳ ವಿಮೆ ರಕ್ಷಣೆಯನ್ನು ಒದಗಿಸಲಾಗುವುದು. ಮಹಾಲಕ್ಷ್ಮಿಯೋಜನೆಯಡಿ ಮಹಿಳೆಯರು ರಾಜ್ಯ ಸರಕಾರದ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಈ ಸಂದರ್ಭದಲ್ಲಿ ರೆಡ್ಡಿಯವರು ರಾಜ್ಯ ಸರಕಾರದ ಪರವಾಗಿ ತೆಲಂಗಾಣದ ನಿಝಾಮಾಬಾದ್ ಮೂಲದ ಖ್ಯಾತ ಬಾಕ್ಸರ್ ನಿಖಾತ್ ಝರೀನ್ ಅವರಿಗೆ ಪ್ರೋತ್ಸಾಹಧನವಾಗಿ ಎರಡು ಕೋಟಿ ರೂ.ಗಳ ಚೆಕ್‌ನ್ನು ಹಸ್ತಾಂತರಿಸಿದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News