ಮಹಿಳಾ ಕಾರಾಗೃಹಗಳ ಸ್ಥಿತಿ ಅತ್ಯಂತ ಶೋಚನೀಯ ; ಸುಪ್ರೀಂ ಕೋರ್ಟ್ ಸಮಿತಿ
ಹೊಸದಿಲ್ಲಿ : ಮೂಲಭೂತ ಸೌಲಭ್ಯಗಳ ಲಭ್ಯತೆ ವಿಚಾರದಲ್ಲಿ ಪುರುಷರಿಗಿಂತ ಮಹಿಳಾ ಕೈದಿಗಳೇ ಹೆಚ್ಚು ಶೋಚನೀಯ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ ತನ್ನ ವರದಿಯಲ್ಲಿ ಪ್ರತಿಪಾದಿಸಿದೆ.
ಕಾರಾಗೃಹ ಸುಧಾರಣೆ ಕುರಿತು ನ್ಯಾಯಮೂರ್ತಿ ಅಮಿತಾವ್ ರಾಯ್ ಅವರ ಸಮಿತಿ ಡಿಸೆಂಬರ್‌ನಲ್ಲಿ ವರದಿ ಸಲ್ಲಿಸಿತ್ತು. ಆಗಸ್ಟ್ 29ರಂದು ವರದಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ಗೋವಾ, ದಿಲ್ಲಿ ಹಾಗೂ ಪುದುಚೇರಿ ಕಾರಾಗೃಹಗಳಲ್ಲಿ ಮಾತ್ರ ಮಹಿಳಾ ಕೈದಿಗಳು ತಮ್ಮ ಮಕ್ಕಳನ್ನು ಯಾವುದೇ ಕಂಬಿ ಅಥವಾ ಗ್ಲಾಸ್‌ನ ತಡೆ ಇಲ್ಲದೆ ಭೇಟಿಯಾಗಲು ಅವಕಾಶ ನೀಡಲಾಗಿದೆ. ಶೇ. 40ಕ್ಕಿಂತ ಕಡಿಮೆ ಕಾರಾಗೃಹಗಳು ಮಾತ್ರ ಮಹಿಳಾ ಕೈದಿಗಳಿಗೆ ನ್ಯಾಪ್ಕಿನ್ ಪೂರೈಸುತ್ತವೆ ಎಂದು ಸಮಿತಿ ಹೇಳಿದೆ.
ಕೇವಲ ಶೇ. 18 ಮಹಿಳಾ ಕೈದಿಗಳು ಮಾತ್ರ ವಿಶೇಷ ಮಹಿಳಾ ಕಾರಾಗೃಹ ಸೌಲಭ್ಯಗಳನ್ನು ಪಡೆಯುತ್ತಾರೆ. ಕೇವಲ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ಮಹಿಳಾ ಕಾರಾಗೃಹಗಳು ಕಾರ್ಯ ನಿರ್ವಹಿಸುತ್ತಿವೆ.
‘‘ ವೈದ್ಯಕೀಯ ಸೌಲಭ್ಯ, ವೈದ್ಯಕೀಯ ಸಿಬ್ಬಂದಿ, ಕಾನೂನು ನೆರವು, ವಕೀಲರಿಂದ ಹಿಡಿದು ವೇತನ ಹಾಗೂ ಮನರಂಜನೆ ಸೌಲಭ್ಯಗಳ ವರೆಗೆ ಮೂಲಭೂತ ಸೌಕರ್ಯಗಳ ಲಭ್ಯತೆಗೆ ಸಂಬಂಧಿಸಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶೋಚನೀಯ ಪರಿಸ್ಥಿತಿಯನ್ನು ಕಾರಾಗೃಹದಲ್ಲಿ ಎದುರಿಸುತ್ತಾರೆ’’ ಎಂದು ವರದಿ ಹೇಳಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ ಪ್ರಕಾರ 2021ರ ಅಂತ್ಯದ ವೇಳೆಗೆ ಭಾರತದಾದ್ಯಂತ 22,918 ಮಹಿಳಾ ಕೈದಿಗಳು ಇದ್ದರು. ಇದು ಒಟ್ಟು ಕೈದಿಗಳ ಸಂಖ್ಯೆಯ ಶೇ. 4.13.
ವಿಚಾರಾಣಾಧೀನ ಮಹಿಳಾ ಕೈದಿಗಳ ವಿಷಯದಲ್ಲಿ ಜನನಿಬಿಡತೆಯ ಸಮಸ್ಯೆ ಮುಖ್ಯವಾಗಿದೆ ಎಂದು ನ್ಯಾಯಮೂರ್ತಿ ಅಮಿತಾವ್ ರಾಯ್ ಸಮಿತಿ ಹೇಳಿದೆ. ಕಳೆದ 5 ವರ್ಷಗಳಿಂದ ಬಾಕಿ ಉಳಿದಿರುವ ಸಣ್ಣ ಪುಟ್ಟ ಪ್ರಕರಣಗಳ ವಿಚಾರಣೆ ನಡೆಸಲು ತ್ವರಿತ ನ್ಯಾಯಾಲಯಗಳನ್ನು ಆರಂಭಿಸುವಂತೆ ಸಮಿತಿ ಸಲಹೆ ನೀಡಿದೆ.