ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದ ಚುನಾವಣಾ ಆಯೋಗ

Update: 2024-06-08 16:03 GMT

ಚುನಾವಣಾ ಆಯೋಗ | PC : PTI 

ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಅಧಿಕೃತವಾಗಿ ಆರಂಭಿಸಿದೆ.

ಚುನಾವಣಾ ಚಿಹ್ನೆಗಳು( ಮೀಸಲಾತಿ ಮತ್ತ ಹಂಚಿಕೆ) ಕಾಯ್ದೆ,1968ರ ಪ್ಯಾರಾ 10ಬಿ ಅಡಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳಿಗಾಗಿ ಸಾಮಾನ್ಯ ಚಿಹ್ನೆಯ ಹಂಚಿಕೆಯನ್ನು ಕೋರಿ ಅರ್ಜಿಗಳನ್ನು ಸ್ವೀಕರಿಸಲು ಆಯೋಗವು ನಿರ್ಧರಿಸಿದ್ದು, ಇದು ತಕ್ಷಣದಿಂದ ಜಾರಿಗೊಂಡಿದೆ ಎಂದು ಕಾರ್ಯದರ್ಶಿ ಜಯದೇವ ಲಾಹಿರಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಜನರು ಶೀಘ್ರವೇ ತಮ್ಮ ಪ್ರಜಸತ್ತಾತ್ಮಕವಾಗಿ ಚುನಾಯಿತ ಸರಕಾರವನ್ನು ಹೊಂದಲಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಇತ್ತೀಚಿಗೆ ತಿಳಿಸಿದ್ದರು.

ಜಮ್ಮು-ಕಾಶ್ಮೀರದಲ್ಲಿ ಕೊನೆಯ ವಿಧಾನಸಭಾ ಚುನಾವಣೆಯು 2014ರಲ್ಲಿ ನಡೆದಿದ್ದು, ಬಿಜೆಪಿ ಮತ್ತು ಮುಫ್ತಿ ಮುಹಮ್ಮದ್ ಸಯೀದ್ ನೇತೃತ್ವದ ಪಿಡಿಪಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿತ್ತು. 2016ರಲ್ಲಿ ಸಯೀದ್ ನಿಧನದ ಬಳಿಕ ಅವರ ಪುತ್ರಿ ಮೆಹಬೂಬ ಮುಫ್ತಿಯವರು ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿಸಿಕೊಂಡಿದ್ದರು.

2019, ಜೂ.18ರಂದು ಬಿಜೆಪಿ ಸಮ್ಮಿಶ್ರ ಸರಕಾರದಿಂದ ಹಿಂದೆ ಸರಿದ ಬಳಿಕ ಮೆಹಬೂಬ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜಮ್ಮು-ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೊಂಡಿತ್ತು ಮತ್ತು ಬಳಿಕ ಅದು ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿತು.

2019, ಆ.5ರಂದು ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿತ್ತು. ಆಗಿನಿಂದಲೂ ಲೆಫ್ಟಿನಂಟ್ ಗವರ್ನರ್ ಜಮ್ಮು-ಕಾಶ್ಮೀರದ ಆಡಳಿತವನ್ನು ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News