ಕುಸಿದ ಶಿವಾಜಿ ಪ್ರತಿಮೆ ನಿರ್ಮಿಸಿದ್ದು ತಾನೆಂದ ನೌಕಾಪಡೆ!
ಮುಂಬೈ: ಮಹಾರಾಷ್ಟ್ರದ ಮಲ್ವಾನ್‌ನಲ್ಲಿ ಈ ವಾರ ಕುಸಿದ ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಎತ್ತರದ ಪ್ರತಿಮೆಯ ಕಲ್ಪನೆ ತನ್ನದಾಗಿತ್ತು ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ಯೋಜನೆಯ ಅನುಷ್ಠಾನವನ್ನು ತಾನೇ ಮಾಡಿರುವುದಾಗಿ ಭಾರತೀಯ ನೌಕಾಪಡೆ ಗುರುವಾರ ಹೇಳಿದೆ.
ಪ್ರತಿಮೆಯನ್ನು ದುರಸ್ತಿ ಮಾಡಿ ಅದನ್ನು ಮರುಸ್ಥಾಪಿಸುವ ಕೆಲಸದೊಂದಿಗೆ ಕೈಜೋಡಿಸಲು ತಾನು ಬದ್ಧವಾಗಿರುವುದಾಗಿ ಹೇಳಿಕೆಯೊಂದರಲ್ಲಿ ಭಾರತೀಯ ನೌಕಾಪಡೆ ತಿಳಿಸಿದೆ.
ಪ್ರತಿಮೆ ಕುಸಿತಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ನೌಕಾಪಡೆ ಅಧಿಕಾರಿಗಳು, ರಾಜ್ಯ ಸರಕಾರದ ಪ್ರತಿನಿಧಿಗಳು ಮತ್ತು ತಾಂತ್ರಿಕ ಪರಿಣತರನ್ನು ಒಳಗೊಂಡ ಜಂಟಿ ತಾಂತ್ರಿಕ ಸಮಿತಿಯೊಂದನ್ನು ರಚಿಸಲಾಗುತ್ತಿದೆ ಎಂದು ಅದು ಹೇಳಿದೆ.
‘‘ಸಿಂಧೂದುರ್ಗದಲ್ಲಿ ಮೊದಲ ಬಾರಿಗೆ ನಡೆದ ನೌಕಾಪಡೆ ದಿನಾಚರಣೆಯ ಅಂಗವಾಗಿ 2023 ಡಿಸೆಂಬರ್ 4ರಂದು ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಸಾಗರತೀರ ರಕ್ಷಣೆಗೆ ಮರಾಠ ನೌಕಾಪಡೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ ನೀಡಿರುವ ಕೊಡುಗೆಯನ್ನು ಸ್ಮರಿಸುವುದಕ್ಕಾಗಿ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಈ ಯೋಜನೆಗೆ ರಾಜ್ಯ ಸರಕಾರವೂ ಹಣ ನೀಡಿತ್ತು’’ ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ.