ಜಿ20 ನಟರಾಜ ಪ್ರತಿಮೆ ಈಗ ಪ್ರಧಾನಿಯ X ಖಾತೆಯಲ್ಲಿ ಕವರ್ ಫೋಟೊ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ತನ್ನ ಅಧಿಕೃತ (ಹಿಂದಿನ ಟ್ವಿಟರ್) ಹ್ಯಾಂಡಲ್ ನ ಕವರನ್ನು ದಿಲ್ಲಿಯ ಪ್ರಗತಿ ಮೈದಾನದಲ್ಲಿಯ ಜಿ20 ಶೃಂಗಸಭೆಯ ತಾಣದಲ್ಲಿ ಸ್ಥಾಪಿಸಲಾಗಿರುವ ನಟರಾಜ ಪ್ರತಿಮೆಯ ಫೋಟೊದೊಂದಿಗೆ ಬದಲಾಯಿಸಿದ್ದಾರೆ.
ಭಾರತವು ಈ ವರ್ಷದ ಜಿ20 ಶೃಂಗಸಭೆಯಲ್ಲಿ ದಿಲ್ಲಿಯಲ್ಲಿ ಆಯೋಜಿಸಿದ್ದು, ಸೆ.9ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಜಿ20 ಗುಂಪಿನ ಅಧ್ಯಕ್ಷನಾಗಿ ಭಾರತವು ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ವಿಶ್ವದ ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರಿಗಾಗಿ ವ್ಯಾಪಕ ವ್ಯವಸ್ಥೆಗಳನ್ನು ಮಾಡಿದೆ.
ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರದ ಪ್ರಕಾರ 10-12 ಕೋಟಿ ರೂ.ವೆಚ್ಚದಲ್ಲಿ ಸಿದ್ಧಗೊಂಡಿರುವ 18 ಟನ್ ತೂಕದ ನಟರಾಜ ಪ್ರತಿಮೆಯು ಅಷ್ಟಧಾತುವಿನಿಂದ ನಿರ್ಮಿಸಲಾದ ಅತ್ಯಂತ ಎತ್ತರದ ಮೂರ್ತಿಯಾಗಿದೆ. ಪ್ರತಿಮೆಯ ನಿರ್ಮಾಣದಲ್ಲಿ ತಾಮ್ರ, ಸತು, ಸೀಸ, ತವರ, ಬೆಳ್ಳಿ, ಬಂಗಾರ, ಪಾದರಸ ಮತ್ತು ಕಬ್ಬಿಣ ಈ ಎಂಟು ಲೋಹಗಳನ್ನು ಬಳಸಲಾಗಿದೆ. ಶಿವನನ್ನು ‘ನೃತ್ಯದ ಅಧಿಪತಿ ’ಎಂದು ಸಂಕೇತಿಸುವ ನಟರಾಜ ಪ್ರತಿಮೆಯನ್ನು ಭಾರತ ಮಂಡಪಂ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ.
ರಾತ್ರಿಯಲ್ಲಿ ತೆಗೆದ ಫೋಟೊ ಜಿ20 ತಾಣವನ್ನು ಬೆಳಗಿಸಿರುವ ನೇರಳೆ ಬಣ್ಣದ ದೀಪಗಳ ಹಿನ್ನೆಲೆಯಲ್ಲಿ ಪ್ರತಿಮೆಯು ಹೊಳೆಯುತ್ತಿರುವುದನ್ನು ತೋರಿಸುತ್ತದೆ. ತಮಿಳುನಾಡಿನ ಸ್ವಾಮಿಮಲೈನ ಶಿಲ್ಪಿ ರಾಧಾಕೃಷ್ಣ ಸ್ಥಪತಿ ಮತ್ತು ಅವರ ತಂಡವು ದಾಖಲೆಯ ಏಳು ತಿಂಗಳುಗಳ ಅವಧಿಯಲ್ಲಿ ನಟರಾಜ ಪ್ರತಿಮೆಯನ್ನು ನಿರ್ಮಿಸಿದೆ. ಪ್ರತಿಮೆಯು ವಿಶೇಷ ಗ್ರೀನ್ ಕಾರಿಡಾರ್ ಮೂಲಕ ತಮಿಳುನಾಡಿನಿಂದ ದಿಲ್ಲಿಯನ್ನು ತಲುಪಿತ್ತು.