ಸಿಎಎ ಅನುಷ್ಠಾನದಿಂದ ಅಸ್ಸಾಂನಲ್ಲಿ ಉದ್ವಿಗ್ನ ಪರಿಸ್ಥಿತಿ ಸಾಧ್ಯತೆ | ಪ್ರಧಾನಿಗೆ ಮನವರಿಕೆ ಮಾಡಲು ಭೇಟಿಗೆ ಪ್ರತಿಪಕ್ಷಗಳು ಮನವಿ

Update: 2024-03-05 15:21 GMT

Photo: scroll.in

ಗುವಾಹಟಿ : ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎಯನ್ನು ಅನುಷ್ಠಾನಗೊಳಿಸಿದರೆ ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಲು ಈ ವಾರಾಂತ್ಯದಲ್ಲಿ ಅಸ್ಸಾಂಗೆ ಭೇಟಿ ನೀಡುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಕೋರಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕೋರಿದ ಪತ್ರವನ್ನು 16 ಪ್ರತಿಪಕ್ಷಗಳನ್ನು ಬೆಂಬಲಿಸುವ ಯುನೈಟೆಡ್ ಒಪೊಶಿಷನ್ ಫೋರಂ ಆಫ್ ಅಸ್ಸಾಂ (ಯುಒಎಫ್ಎ)ನ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಅವರು ರವಾನಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಅಸ್ಸಾಂ ಜನರ ಸಂಸ್ಕೃತಿ, ಇತಿಹಾಸ, ಸಾಮಾಜಿಕ-ಆರ್ಥಿಕ ಪರಿಸ್ಥಿತಿ, ಸಾಮಾಜಿಕ ವಿನ್ಯಾಸ ಹಾಗೂ ಅನನ್ಯತೆಯನ್ನು ಅಪಾಯಕ್ಕೆ ನೂಕಲಿದೆ ಎಂಬ ದೃಢವಾದ ಗ್ರಹಿಕೆ ಜಾತಿ, ಧರ್ಮ ಹಾಗೂ ಪಕ್ಷ ಭೇದವಿಲ್ಲದೆ ಎಲ್ಲಾ ಜನರಲ್ಲಿದೆ ಎಂದು ಪತ್ರಿಕೆಗಳೊಂದಿಗೆ ಹಂಚಿಕೊಂಡ ಪತ್ರದ ಪ್ರತಿಯಲ್ಲಿ ಹೇಳಲಾಗಿದೆ.

ಇದಲ್ಲದೆ, ಅಸ್ಸಾಂನ ಜನರ ಜೀವನಾಡಿ ಎಂದು ಪರಿಗಣಿಸಲಾದ ಜಾರಿತ್ರಿಕ ಅಸ್ಸಾಂ ಒಪ್ಪಂದ 1985ನ್ನು ಈ ಕಾಯ್ದೆ ರದ್ದುಪಡಿಸುತ್ತದೆ ಎಂದು ಅದು ಹೇಳಿದೆ. ಮುಂದಿನ ದಿನಗಳಲ್ಲಿ ಅಸ್ಸಾಂನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸುವುದು ತುರ್ತು ಎಂದು ಯುಒಎಫ್ಎ ಪರಿಗಣಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೇಟಿಗೆ ಅವಕಾಶ ನೀಡುವಂತೆ ಕೋರಿರುವ ಪ್ರತಿಪಕ್ಷಗಳು, ಮೋದಿ ಅವರು ಮಾರ್ಚ್ 8-9ರಂದು ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭ ಭೇಟಿಗೆ ಪ್ರಸ್ತಾವವನ್ನು ಮುಂದಿಟ್ಟಿವೆ.

ಲೋಕಸಭೆ ಚುನಾವಣೆಗೆ ಮುನ್ನ ಸಿಎಎ ನಿಯಮಗ ಕುರಿತು ಅಧಿಸೂಚನೆ ಹೊರಡಿಸಲಾಗುವುದು ಹಾಗೂ ಅನಂತರ ಅನುಷ್ಠಾನಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ಮೊದಲು 2019-20ರಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭ ಐವರು ಮೃತಪಟ್ಟಿದ್ದಾರೆ ಹಾಗೂ ಇತರ ಹಲವರು ಗಾಯಗೊಂಡಿದ್ದಾರೆ ಎಂದು ಪತ್ರ ಉಲ್ಲೇಖಿಸಿದೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News