ಕೇಜ್ರಿವಾಲ್ ಜಾಮೀನಿಗೆ ತಡೆ ನೀಡಿದ್ದ ನ್ಯಾಯಾಧೀಶರು ಈ.ಡಿ. ವಕೀಲರ ಸೋದರ: 150 ವಕೀಲರಿಂದ ಸಿಜೆಐಗೆ ಪತ್ರ
ಹೊಸದಿಲ್ಲಿ: ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾ.ಸುಧೀರ ಕುಮಾರ ಜೈನ್ ಅವರು ಆದೇಶವನ್ನು ಓದದೇ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜಾಮೀನನ್ನು ರದ್ದುಗೊಳಿಸಿದ್ದ ರೀತಿಯ ಕುರಿತು ದಿಲ್ಲಿ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ 150 ವಕೀಲರ ನಿಯೋಗವು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರವನ್ನು ಬರೆದಿದೆ.
ನ್ಯಾ.ಜೈನ್ ಅವರ ಸೋದರ ಜಾರಿ ನಿರ್ದೇಶನಾಲಯ (ಈ.ಡಿ)ದ ಪರ ನ್ಯಾಯವಾದಿಯಾಗಿದ್ದಾರೆ ಎಂದು ಈ ವಕೀಲರು ತಮ್ಮ ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ. ಇದು ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಈ.ಡಿ.ದಾಖಲಿಸಿಕೊಂಡಿರುವ ಪ್ರಕರಣವಾಗಿದ್ದು, ಬಂಧಿಸಲ್ಪಟ್ಟಿರುವ ಕೇಜ್ರಿವಾಲ್ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ.
ಕಳೆದ ತಿಂಗಳು ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಕೇಜ್ರಿವಾಲ್‌ಗೆ ಜಾಮೀನು ನೀಡಿದ ಬೆನ್ನಲ್ಲೇ ಸಿಬಿಐ ಅವರನ್ನು ಬಂಧಿಸಿತ್ತು.
ಜೂ.20ರಂದು ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯವು ಈ.ಡಿ. ಅವರ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಹೇಳಿತ್ತು. ಈ.ಡಿ. ಮುಖ್ಯಮಂತ್ರಿಗಳ ಬಂಧನಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ನ್ಯಾ.ನ್ಯಾಯ ಬಿಂದು ಹೇಳಿದ್ದರು.
ವಕೀಲರ ಪತ್ರವು ಸ್ಪಷ್ಟ ಹಿತಾಸಕ್ತಿ ಸಂಘರ್ಷವನ್ನು ಎತ್ತಿ ತೋರಿಸಿದೆ. ನ್ಯಾ.ಜೈನ್ ಅವರ ಖಾಸಾ ಸೋದರ ಈ.ಡಿ.ವಕೀಲರಾಗಿರುವುದರಿಂದ ಅವರು ವಿಚಾರಣೆಯಿಂದ ಹಿಂದಕ್ಕೆ ಸರಿಯಬೇಕಾಗಿತ್ತು. ಈ ಸ್ಪಷ್ಟ ಹಿತಾಸಕ್ತಿ ಸಂಘರ್ಷವನ್ನು ನ್ಯಾ.ಜೈನ್ ಎಂದಿಗೂ ಘೋಷಿಸಿರಲಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಅಭೂತಪೂರ್ವ ಕ್ರಮದಲ್ಲಿ ಜಾಮೀನು ಆದೇಶವು ಅಧಿಕೃತವಾಗಿ ಅಪ್‌ಲೋಡ್ ಆಗುವ ಮುನ್ನವೇ ನ್ಯಾ.ಜೈನ್ ಅವರು ಕೇಜ್ರಿವಾಲ್‌ರ ಜಾಮೀನನ್ನು ಪ್ರಶ್ನಿಸಲು ಈ.ಡಿ.ವಕೀಲರಿಗೆ ಅನುಮತಿಯನ್ನು ನೀಡಿದ್ದರು ಮತ್ತು ಜಾಮೀನು ಆದೇಶಕ್ಕೆ ತಡೆಯನ್ನು ವಿಧಿಸಿದ್ದರು. ಇಂತಹುದು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ವಕೀಲರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಆಪ್‌ನ ಮುಖ್ಯ ವಕೀಲ ಸಂಜೀವ ನಸಿಯಾರ್ ಅವರೂ ಭಾಗವಾಗಿರುವ ವಕೀಲರ ನಿಯೋಗವು,ಅಂತಿಮ ಆದೇಶಗಳನ್ನು ಹೊರಡಿಸದಂತೆ ಮತ್ತು ರಜೆಯ ಬಳಿಕ ನಿಯಮಿತ ನ್ಯಾಯಾಲಯಗಳಿಗೆ ನೋಟಿಸ್‌ಗಳನ್ನು ಮಾತ್ರ ನೀಡುವಂತೆ ರೌಸ್ ಅವೆನ್ಯು ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು ಬೇಸಿಗೆ ವಿರಾಮದಲ್ಲಿ ಕಾರ್ಯ ನಿರ್ವಹಿಸುವ ರಜಾಕಾಲದ ನ್ಯಾಯಾಲಯಗಳಿಗೆ ಹೊರಡಿಸಿದ್ದ ಆಂತರಿಕ ಆಡಳಿತಾತ್ಮಕ ಆದೇಶವನ್ನೂ ಎತ್ತಿ ತೋರಿಸಿದೆ.
ಈ ಕ್ರಮವು ರಜಾಕಾಲದ ನ್ಯಾಯಾಲಯಗಳ ಉದ್ದೇಶವನ್ನು ಕಡೆಗಣಿಸಿದೆ ಮತ್ತು ಇಂತಹ ಆದೇಶದ ವಿರುದ್ಧ ಬಲವಾದ ಆಕ್ಷೇಪವನ್ನು ಸಲ್ಲಿಸಲು ಬಯಸಿದ್ದೇವೆ ಎಂದೂ ಪತ್ರದಲ್ಲಿ ಹೇಳಲಾಗಿದೆ.