ಅಮೆರಿಕದಲ್ಲಿ ತೆಲುಗು ಭಾಷಿಗರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳ
ಹೈದರಾಬಾದ್: ಅಮೆರಿಕದಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದೆ. 2016ರಲ್ಲಿ 3.2 ಲಕ್ಷ ಇದ್ದ ತೆಲುಗು ಭಾಷಿಗರ ಸಂಖ್ಯೆ 2024ರಲ್ಲಿ 12.3 ಲಕ್ಷಕ್ಕೆ ಏರಿದೆ.
ಅಮೆರಿಕದ ಜನಗಣತಿ ಬ್ಯೂರೊ ಅಂಕಿ ಅಂಶಗಳನ್ನು ಆಧರಿಸಿ ಸಿದ್ಧಪಡಿಸಿರುವ ಸ್ಟೆಟಿಸ್ಟಿಕಲ್ ಅಟ್ಲಾಸ್ ಆಫ್ ಅಮೆರಿಕ ವರದಿಯಲ್ಲಿ ಈ ಅಂಶವನ್ನು ದಾಖಿಸಲಾಗಿದೆ. ಇದರಲ್ಲಿ ನಾಲ್ಕು ತಲೆಮಾರಿನ ವಲಸೆಗಾರರಿಂದ ಇತ್ತೀಚೆಗೆ ಆಗಮಿಸಿದ ವಿದ್ಯಾರ್ಥಿಗಳ ವರೆಗೆ ಸಮಗ್ರ ಮಾಹಿತಿ ಇದೆ.
ಕ್ಯಾಲಿಫೋರ್ನಿಯಾದಲ್ಲಿ ಅತ್ಯಧಿಕ ತೆಲುಗು ಭಾಷಿಕರಿದ್ದು ಸುಮಾರು 2 ಲಕ್ಷ ಮಂದಿ ಇಲ್ಲಿ ತೆಗುಲು ಮಾತನಾಡುತ್ತಾರೆ. ಉಳಿದಂತೆ ಟೆಕ್ಸಾಸ್ (1.5 ಲಕ್ಷ), ನ್ಯೂಜೆರ್ಸಿ (1.1 ಲಕ್ಷ) ತೆಲುಗು ಭಾಷಿಕರಿದ್ದಾರೆ. ಇಲಿನೊಯಿಸ್ (83 ಸಾವಿರ), ವರ್ಜೀನಿಯಾ (78 ಸಾವಿರ), ಜಾರ್ಜಿಯಾ (52 ಸಾವಿರ) ರಾಜ್ಯಗಳಲ್ಲಿ ಅತ್ಯಧಿಕ ಮಂದಿ ತೆಲುಗು ಮಾತನಾಡುತ್ತಾರೆ. ಈ ರಾಜ್ಯಗಳಲ್ಲಿ ಕಳೆದ ಎಂಟು ವರ್ಷ ಅವಧಿಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿರುವುದನ್ನು ವರದಿ ಉಲ್ಲೇಖಿಸಿದೆ. ತಮ್ಮ ಅಂದಾಜಿನ ಅನುಸಾರವಾಗಿಯೇ ಈ ವರದಿ ಇದೆ ಎಂದು ತೆಲುಗು ಸಂಘ ಹೇಳಿದೆ.
ಪ್ರತಿ ವರ್ಷ 60 ರಿಂದ 70 ಸಾವಿರ ವಿದ್ಯಾರ್ಥಿಗಳು ಅಮೆರಿಕಕ್ಕೆ ಆಗಮಿಸುತ್ತಾರೆ ಹಾಗೂ ಸುಮಾರು 10 ಸಾವಿರ ಮಂದಿ ಎಚ್1ಬಿ ವೀಸಾ ಪಡೆಯುತ್ತಿದ್ದಾರೆ. ಈ ಪೈಕಿ ಶೇಕಡ 80ರಷ್ಟು ಮಂದಿ ಅಮೆರಿಕದಲ್ಲಿ ನೋಂದಣಿಯಾಗುತ್ತಾರೆ ಎಂದು ಉತ್ತರ ಅಮೆರಿಕದ ತೆಲುಗು ಸಂಘದ ಮಾಜಿ ಕರ್ಯದರ್ಶಿ ಅಶೋಕ್ ಕೊಲ್ಲಾ ವಿವರಿಸುತ್ತಾರೆ. "ಈ ಪೈಕಿ ಶೇಕಡ 75ರಷ್ಟು ಮಂದಿ ಇಲ್ಲಿ ನೆಲೆಸುತ್ತಾರೆ. ಪ್ರಮುಖವಾಗಿ ಉತ್ತರ ಕ್ಯಾಲಿಫೋರ್ನಿಯಾದ ದಲ್ಲಾಸ್ ಕೊಲ್ಲಿ, ನ್ಯೂಜೆರ್ಸಿ, ಅಟ್ಲಾಂಟಾ, ಫ್ಲೋರಿಡಾ ಮತ್ತು ನ್ಯಾಷ್ವಿಲ್ಲೆಯಲ್ಲಿ ಹೆಚ್ಚಿನವರು ನೆಲೆಸುತ್ತಾರೆ" ಎಂದು ಅವರು ತಿಳಿಸಿದ್ದಾರೆ.
ಹಳೆ ತಲೆಮಾರಿನವರು ಪ್ರಮುಖವಾಗಿ ಉದ್ಯಮಶೀಲರಾಗಿದ್ದು, ಯುವಜನರಲ್ಲಿ ಶೇಕಡ 80ರಷ್ಟು ಮಂದಿ ಐಟಿ ಮತ್ತು ಹಣಕಾಸು ಕ್ಷೇತ್ರದವರು. ತೆಲುಗು ಪ್ರಭಾವ ಎಷ್ಟರ ಮಟ್ಟಿಗೆ ಹೆಚ್ಚುತ್ತಿದೆ ಎಂದರೆ ಅಮೆರಿಕದಲ್ಲಿ ಮಾತನಾಡುವ 350 ಭಾಷೆಗಳ ಪೈಕಿ ತೆಲುಗು 11ನೇ ಸ್ಥಾನದಲ್ಲಿದೆ. ಇದು ಹಿಂದಿ ಮತ್ತು ಗುಜರಾತಿ ಹೊರತುಪಡಿಸಿದರೆ ಅತಿಹೆಚ್ಚು ಮಾತನಾಡುವ ಭಾರತೀಯ ಭಾಷೆ ಎನಿಸಿಕೊಂಡಿದೆ.