ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರ ಸ್ವೀಕಾರಾರ್ಹವಲ್ಲ: ಅರವಿಂದ್ ಕೇಜ್ರಿವಾಲ್

Update: 2024-05-17 15:54 GMT

ಅರವಿಂದ್ ಕೇಜ್ರಿವಾಲ್ | PC :PTI 

ಚಂಡಿಗಢ: ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರ ಸ್ವೀಕಾರಾರ್ಹವಲ್ಲ. ಕಳೆದ 75 ವರ್ಷಗಳಲ್ಲಿ ಇಂತಹ ಅವಧಿಯನ್ನು ದೇಶ ಎಂದೂ ನೋಡಿಲ್ಲ. ಪ್ರತಿಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಪಂಜಾಬ್ ನ ಅಮೃತಸರದಲ್ಲಿ ಆಪ್ ಶಾಸಕರು ಸೇರಿದಂತೆ ಕಾರ್ಯಕರ್ತರು ಹಾಗೂ ನಾಯಕರನ್ನು ಉದ್ದೇಶಿಸಿ ಕೇಜ್ರಿವಾಲ್ ಮಾತನಾಡಿದರು. ಅಲ್ಲದೆ, ಪಂಜಾಬ್ ನ ಎಲ್ಲಾ 13 ಲೋಕಸಭಾ ಕ್ಷೇತ್ರಗಳಲ್ಲಿ ಆಪ್ ಜಯ ಗಳಿಸಲು ಅತ್ಯುತ್ತಮ ಪ್ರಯತ್ನ ಮಾಡುವಂತೆ ಮನವಿ ಮಾಡಿದರು.

‘‘ರಷ್ಯಾದಲ್ಲಿ ವ್ಲಾದಿಮಿರ್ ಪುಟಿನ್ ಎಲ್ಲಾ ಪ್ರತಿಸ್ಪರ್ಧಿ ನಾಯಕರನ್ನು ಜೈಲಿಗೆ ಕಳುಹಿಸಿದರು ಅಥವಾ ಹತ್ಯೆಗೈದರು. ಅನಂತರ ಚುನಾವಣೆ ನಡೆಸಿದರು ಹಾಗೂ ಶೇ. 87 ಮತ ಗಳಿಸಿದರು. ಯಾವುದೇ ವಿರೋಧ ಪಕ್ಷವಿಲ್ಲದಾಗ, ನೀವು ಮಾತ್ರ ಮತಗಳನ್ನು ಪಡೆಯುತ್ತೀರಿ’’ ಎಂದು ಅವರು ಹೇಳಿದರು.

‘‘ಅವರು ನನ್ನನ್ನು ಜೈಲಿಗೆ ಹಾಕಿದರು. ಮನೀಷ್ ಸಿಸೋಡಿಯಾ (ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ) ಅವರನ್ನು ಜೈಲಿಗೆ ಹಾಕಿದರು, ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಿದರು, ತೃಣಮೂಲಕ ಕಾಂಗ್ರೆಸ್ ಗೆ ತೊಂದರೆ ನೀಡಿದರು, ಸ್ಟಾಲಿನ್ (ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್)ರ ಸಚಿವರನ್ನು ಜೈಲಿಗೆ ಹಾಕಿದರು’’ ಎಂದು ಅವರು ಹೇಳಿದರು.

‘‘ಎಲ್ಲರನ್ನೂ ಜೈಲಿಗೆ ಹಾಕಿ. ಆಗ ಒಂದೇ ಒಂದು ಪಕ್ಷ ಹಾಗೂ ಓರ್ವ ನಾಯಕ ಉಳಿಯುತ್ತಾನೆ. ಆದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ನಾವು ಇದಕ್ಕೆ ಅವಕಾಶ ನೀಡಬಾರದು’’ ಎಂದು ಕೇಜ್ರಿವಾಲ್ ಹೇಳಿದರು.

ಕೇಜ್ರಿವಾಲ್ ಅವರು ಗುರುವಾರ ಪಂಜಾಬ್ ಗೆ ಆಗಮಿಸಿದ್ದು, ಆಪ್ ನ ಅಮೃತಸರದ ಅಭ್ಯರ್ಥಿ ಕುಲ್ದೀಪ್ ಸಿಂಗ್ ಧಲಿವಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಶುಕ್ರವಾರ ರೋಡ್ ಶೋ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News