ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಟನೊಂದಿಗೇ ತಬ್ಬಿಕೊಳ್ಳುವ ದೃಶ್ಯ | 17 ಟೇಕ್‌ ಮಾಡಿಸಿದ ಚಿತ್ರತಂಡ!

Update: 2024-08-20 14:05 GMT
PC : indianexpress.com

ತಿರುವನಂತಪುರಂ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಟನೊಂದಿಗೇ ನಟಿಗೆ ಪತ್ನಿಯಾಗಿ ನಟಿಸಬೇಕಾಗಿತ್ತು. ಮಾನಸಿಕ ಯಾತನೆ ಅನುಭವಿಸುತ್ತಿದ್ದ ನಟಿಗೆ, ತಬ್ಬಿಕೊಳ್ಳುವ ದೃಶ್ಯಕ್ಕೆ ತಕ್ಕುದಾದ ರೀತಿಯಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಸಹಜತೆ ಬರಲಿಲ್ಲ. ಕೊನೆಗೆ ಚಿತ್ರತಂಡವು 17 ಬಾರಿ ರಿಟೇಕ್ ಮಾಡಿಸಿತು. ಅಷ್ಟಾದರೂ ಆ ನಟಿ, ಟೀಕೆಗೆ ಗುರಿಯಾದರು.

ಇದು ಮಲಯಾಳಂ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯಲ್ಲಿನ ಒಂದು ಘಟನೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಟನೊಂದಿಗೆ ಕೆಲಸ ಮಾಡಬೇಕಾಗಿ ಬಂದ ಆಘಾತಕಾರಿ ಘಟನೆಯನ್ನು ನಟಿಯು ಸಮಿತಿಯ ಮುಂದೆ ಬಹಿರಂಗಪಡಿಸಿದ್ದಾರೆ.

2017ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟಿಯೊಬ್ಬರ ಲೈಂಗಿಕ ದೌರ್ಜನ್ಯದ ನಂತರ, ಕೇರಳ ಸರಕಾರವು ನಿವೃತ್ತ ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು ನೇಮಿಸಿತು. ತ್ರಿಸದಸ್ಯ ಸಮಿತಿಯಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದ ಅವರು ಸದಸ್ಯರಾಗಿದ್ದರು. ಡಿಸೆಂಬರ್ 2019ರಲ್ಲಿ ಸಮಿತಿಯು ಕೇರಳ ಸರಕಾರಕ್ಕೆ ತನ್ನ ವರದಿ ಸಲ್ಲಿಸಿತು. ನಾಲ್ಕೂವರೆ ವರ್ಷಗಳ ನಂತರ, ವರದಿಯನ್ನು ಬಿಡುಗಡೆ ಮಾಡಲಾಗಿದೆ.

ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದಿದೆ. ಲೈಂಗಿಕ ಕಿರುಕುಳ, ಮಹಿಳೆಯರ ಶೌಚಾಲಯಗಳು ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳಂತಹ ಮೂಲಭೂತ ಸೌಲಭ್ಯಗಳ ಕೊರತೆ, ಲಿಂಗ ಪಕ್ಷಪಾತ ಮತ್ತು ತಾರತಮ್ಯ, ಸಂಭಾವನೆಯಲ್ಲಿ ಅಸಮಾನತೆ ಮತ್ತು ಅವರ ಸಮಸ್ಯೆಗಳನ್ನು ವರದಿಯು ಉಲ್ಲೇಖಿಸಿದೆ.

“ಸಿನಿಮಾದಲ್ಲಿ ಮಹಿಳೆಯರು ಹಣ ಸಂಪಾದಿಸಲು ಚಿತ್ರರಂಗಕ್ಕೆ ಬರುತ್ತಾರೆ. ಅವರು ಯಾವುದಕ್ಕೂ ʼಸಿದ್ಧʼ ಎಂಬ ಸಾಮಾನ್ಯ ಊಹೆ ಮಲಯಾಳಂ ಚಿತ್ರರಂಗದಲ್ಲಿ ಇದೆ. ಹೆಣ್ಣು ಸಿನಿಮಾಗೆ ಬರಲು ಕಲೆ ಮತ್ತು ನಟನೆಯ ಮೇಲಿನ ಅಭಿರುಚಿಯೇ ಕಾರಣ ಎಂದು ಸಿನಿಮಾದಲ್ಲಿರುವ ನಟರಿಂದ ಒಪ್ಪಿಕೊಳ್ಳಗುತ್ತಿಲ್ಲ. ಆದರೆ ಅವರು ಖ್ಯಾತಿ ಮತ್ತು ಹಣಕ್ಕಾಗಿ ಬರುತ್ತಿದ್ದಾರೆ ಎಂಬ ಊಹೆಯೇ ಹೆಚ್ಚಿದೆ. ನಟಿಯರು ಚಲನಚಿತ್ರದಲ್ಲಿ ಅವಕಾಶ ಪಡೆಯಲು ಯಾವುದೇ ವ್ಯಕ್ತಿಯೊಂದಿಗೆ ಮಲಗುತ್ತಾರೆ ಎಂಬ ಸಾಮಾನ್ಯ ಅನಿಸಿಕೆ ಚಿತ್ರರಂಗದಲ್ಲಿದೆ. ರಾತ್ರಿ ಹೊತ್ತು ಕುಡಿತದ ಅಮಲೇರಿದ ಚಿತ್ರ ತಂಡದ ಸದಸ್ಯರು ನಟಿಯರಿರುವ ಕೊಠಡಿಯು ಬಾಗಿಲು ತಟ್ಟಿ ಹಿಂಸೆ ನೀಡುತ್ತಾರೆ” ಎಂದು ವರದಿಯಲ್ಲಿ ಹೇಳಿದೆ.

“ನಟನೆಯಲ್ಲಿ ಆಸಕ್ತಿ ಹೊಂದಿರುವ ಮಹಿಳೆಯರು ಎಲ್ಲಾ ದೌರ್ಜನ್ಯಗಳನ್ನು ಮೌನವಾಗಿ ಸಹಿಸುತ್ತಿದ್ದಾರೆ. ಅವರು ತಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಲು ಹೆದರುತ್ತಾರೆ. ಒಂದು ವೇಳೆ ಹೇಳಲು ಹೋದರೆ ಚಿತ್ರರಂಗದಿಂದ ಬಹಿಷ್ಕಾರಕ್ಕೆ ಒಳಗಾಗುವ ಸಾಧ್ಯಯೇ ಹೆಚ್ಚು. ಆ ಕಾರಣಕ್ಕಾಗಿ ಅವರು ಸುಮ್ಮನಾಗುತ್ತಿದ್ದಾರೆ” ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News