ನಮ್ಮ ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ ಇಂದಿನಿಂದ ಪ್ರಾರಂಭಗೊಂಡಿದೆ: ಮಲ್ಲಿಕಾರ್ಜುನ ಖರ್ಗೆ

Update: 2024-04-19 06:51 GMT

ಮಲ್ಲಿಕಾರ್ಜುನ ಖರ್ಗೆ| PC : PTI 

ಹೊಸದಿಲ್ಲಿ: ಶುಕ್ರವಾರ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಾರಂಭಗೊಂಡಿದ್ದು, ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನಿಮ್ಮ ಮತಗಳನ್ನು ಜಾಗರೂಕತೆಯಿಂದ ಚಲಾಯಿಸಿ ಹಾಗೂ ಆರ್ಥಿಕ ಸಬಲೀಕರಣ ಮತ್ತು ಸಮಾನ ಅವಕಾಶಗಳ ಹೊಸ ಯುಗ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ” ಎಂದು ಮನವಿ ಮಾಡಿದ್ದಾರೆ.

“ಪ್ರಿಯ ನಾಗರಿಕರೆ, 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನ ಮಾಡುತ್ತಿರುವವರು ಜಾಗರೂಕತೆಯಿಂದ ತಮ್ಮ ಮತ ಚಲಾಯಿಸಿ ಎಂದು ನಾನು ಮನವಿ ಮಾಡುತ್ತೇನೆ. ನ್ಯಾಯದ ಭವಿಷ್ಯವು ನಿಮಗಾಗಿ ಕಾಯುತ್ತಿದೆ. ಆರ್ಥಿಕ ಸಬಲೀಕರಣ ಮತ್ತು ಸಮಾನ ಅವಕಾಶಗಳ ಯುಗ ನಿಮ್ಮನ್ನು ಕೈಬೀಸಿ ಕರೆಯುತ್ತಿದೆ” ಎಂದು ಅವರು ಹೇಳಿದ್ದಾರೆ.

“ಕಳೆದ 10 ವರ್ಷಗಳಿಂದ ಮುಂದುವರಿದಿರುವ ನಿರುದ್ಯೋಗದ ಬದಲು ಯುವ ನ್ಯಾಯದಿಂದ ಆಗಲಿರುವ ಉದ್ಯೋಗ ಕ್ರಾಂತಿಗೆ ನೀವೆಲ್ಲ ಮತ ನೀಡುತ್ತೀರಿ ಎಂದು ನನಗೆ ಭರವಸೆ ಇದೆ” ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ನೀವು ಇವಿಎಂ ಗುಂಡಿಯನ್ನು ಒತ್ತುವುದಕ್ಕೂ ಮುನ್ನ ಒಂದು ಕ್ಷಣ ನಿಲ್ಲಿ. ನಿಮಗೆ ಸರ್ವಾಧಿಕಾರದ ಮೂಲಕ ಸಾಂವಿಧಾನಿಕ ಸಂಸ್ಥೆಗಳ ಬುಡಮೇಲು ಮಾಡುವುದು ಬೇಕೊ ಅಥವಾ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಬೇಕೊ ಎಂದು ಪ್ರಶ್ನಿಸಿಕೊಳ್ಳಿ” ಎಂದು ಅವರು ಮನವಿ ಮಾಡಿದ್ದಾರೆ.

ಭಾರತದ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ ಎಂದು ಹೇಳಿರುವ ಖರ್ಗೆ, ಮೊದಲ ಬಾರಿಯ ಮತದಾರರಿಗೆ ಸ್ವಾಗತ ಕೋರಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿ ಎಂದೂ ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News