ತಮಿಳುನಾಡಿನ ಮಾಜಿ ಸಚಿವ ಬಾಲಾಜಿ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Update: 2024-04-29 16:05 GMT

 ಸುಪ್ರೀಂ ಕೋರ್ಟ್ | PC : PTI  

ಹೊಸದಿಲ್ಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜಾರಿ ನಿರ್ದೇಶನಾಲಯ (ಈಡಿ)ದಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡು ಮಾಜಿ ಸಚಿವ ವಿ.ಸೆಂಥಿಲ್ ಬಾಲಾಜಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರ ಸರ್ವೋಚ್ಚ ನ್ಯಾಯಾಲಯವು ಮೇ 6ರವರೆಗೆ ಮುಂದೂಡಿದೆ.

ಈಡಿ ಪರ ಹಾಜರಾಗಿದ್ದ ವಕೀಲರು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಲಭ್ಯರಿಲ್ಲ, ಹೀಗಾಗಿ ವಿಚಾರಣೆಯನ್ನು ಮಂದೂಡುವಂತೆ ಮಾಡಿಕೊಂಡ ಕೋರಿಕೆಯನ್ನು ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಪುರಸ್ಕರಿಸಿತು.

ಅರ್ಜಿಯ ವಿಚಾರಣೆಯನ್ನು ನಡೆಸುವಂತೆ ಪೀಠವನ್ನು ಆಗ್ರಹಿಸಿದ ಬಾಲಾಜಿ ಪರ ಹಿರಿಯ ವಕೀಲ ಆರ್ಯಮಾ ಸುಂದರಂ ಅವರು, ತನ್ನ ಕಕ್ಷಿದಾರರು 320 ದಿನಗಳಿಂದ ಜೈಲಿನಲ್ಲಿದ್ದಾರೆ ಎಂದು ವಾದಿಸಿದರು. ಪ್ರಕರಣದಲ್ಲಿ ಈಡಿ ಸಲ್ಲಿಸಿರುವ ಉತ್ತರವನ್ನು ತಾನಿನ್ನೂ ನೋಡಿಲ್ಲ ಎಂದು ಹೇಳಿದ ಪೀಠವು ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿತು.

ಮದ್ರಾಸ್ ಉಚ್ಚ ನ್ಯಾಯಾಲಯವು ಬಾಲಾಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಫೆ.28ರಂದು ವಜಾಗೊಳಿಸಿತ್ತು. ಬಳಿಕ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈಡಿ ಕಳೆದ ವರ್ಷದ ಜೂನ್‌ನಲ್ಲಿ ಹಿಂದಿನ ಎಐಎಡಿಎಂಕೆ ಆಡಳಿತದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಲಂಚ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಾಜಿಯವರನ್ನು ಬಂಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News