ನೂತನ ಕ್ರಿಮಿನಲ್ ಕಾನೂನುಗಳ ಜಾರಿ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಭಾರತದ ಕ್ರಿಮಿನಲ್ ದಂಡ ಸಂಹಿತೆಗಳನ್ನು ತೆರವುಗೊಳಿಸಲಿರುವ ನೂತನ ಮೂರು ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಹಾಗೂ ಪಂಕಜ್ ಮಿತ್ತಲ್ ಅವರು ಅರ್ಜಿದಾರ ನ್ಯಾಯವಾದಿ ವಿಶಾಲ್ ತಿವಾರಿ ಅವರಿಗೆ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿದರು.
ಪ್ರಸಕ್ತ ಚಾಲ್ತಿಯಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಅನ್ನು ನೂತನವಾಗಿ ಜಾರಿಗೆ ಬರಲಿರುವ ಭಾರತೀಯ ನ್ಯಾಯಸಂಹಿತೆ, ಭಾರತೀಯ ನಾಗರಿಕ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ತೆರವುಗೊಳಿಸಲಿವೆ.
ಈ ಮೂರು ಕಾನೂನುಗಳು ಈವರೆಗೆ ಜಾರಿಗೆ ಬಂದಿರದೆ ಇರುವುದರಿಂದ ಈ ಅರ್ಜಿಯನ್ನು ಪುರಸ್ಕರಿಸಲು ತಾನು ಅನಾಸಕ್ತಿ ಹೊಂದಿದ್ದು, ಅದನ್ನು ತಳ್ಳಿಹಾಕುವುದಾಗಿ ನ್ಯಾಯಪೀಠ ತಿಳಿಸಿತು.
ಅರ್ಜಿಯನ್ನು ಅತ್ಯಂತ ಸಾಮಾನ್ಯ ರೀತಿಯಲ್ಲಿ ಹಾಗೂ ಅಸಡ್ಡೆಯೊಂದಿಗೆ ಸಲ್ಲಿಸಲಾಗಿದೆ. ಹೀಗಾಗಿ ತನಗೆ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡಬೇಕೆಂದು ತಿವಾರಿ ಆಗ್ರಹಿಸಿದರು.
ಒಂದು ವೇಳೆ ಈ ಬಗ್ಗೆ ಹೆಚ್ಚು ವಾದ ಮಾಡಿದಲ್ಲಿ, ದಂಡ ಪಾವತಿಸುವಂತೆ ಸೂಚಿಸಿ ಅರ್ಜಿಯನ್ನು ತಳ್ಳಿಹಾಕುತ್ತಿದ್ದೆವು. ಆದರೆ ನೀವು ವಾದಿಸದೆ ಇರುವುದರಿಂದ, ನ್ಯಾಯಾಲಯ ಯಾವುದೇ ದಂಡವನ್ನು ಹೇರಿಲ್ಲವೆಂದು ನ್ಯಾಯಪೀಠ ತಿಳಿಸಿತು.
ಆಗ ನ್ಯಾಯವಾದಿ ಆಂತರ ತಿವಾರಿ ಅವರು ತನಗೆ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಬೇಕೆಂದು ಕೋರಿದರು.
ನೂತನ ಮೂರು ಕಾನೂನುಗಳ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಬೇಕೆಂದು ತಿವಾರಿ ಅವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಕೋರಿದ್ದರು. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬಹುತೇಕ ಸದಸ್ಯರು ಅಮಾನತುಗೊಂಡಿದ್ದ ಸಂದರ್ಭದಲ್ಲಿಯೇ ಈ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದು ಅರ್ಜಿದಾರ ವಿಶಾಲ್ ತಿವಾರಿ ವಾದಿಸಿದ್ದರು.