ಧನಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಮೇಲಿದೆ 49 ಕ್ರಿಮಿನಲ್ ಕೇಸ್!

Update: 2024-04-01 15:16 GMT

ರಾಂಚಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧನಬಾದ್ ನಿಂದ ಬಿಜೆಪಿ ಅಭ್ಯರ್ಥಿ ದುಲೋ ಮಹತೋ ಉಮೇದುವಾರಿಕೆಯನ್ನು ಮರುಪರಿಶೀಲಿಸುವಂತೆ ಕೋರಿ ನಗರದ ವ್ಯಾಪಾರಿ ಸಮುದಾಯವು ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ ಮರಾಂಡಿಯವರಿಗೆ ಪತ್ರ ಬರೆದಿದೆ. ಧನಬಾದ್ ಪ್ರದೇಶದಲ್ಲಿ ಕಲ್ಲಿದ್ದಲು ಕಳ್ಳಸಾಗಾಣಿಕೆ, ಹಫ್ತಾ ವಸೂಲಿ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದಂತೆ ಮಹತೋ ವಿರುದ್ಧ ಬರೋಬ್ಬರಿ 49 ಕ್ರಿಮಿನಲ್ ಪ್ರಕರಣಗಳಿದ್ದು, ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿದೆ.

ಪತ್ರದ ಪ್ರತಿಗಳನ್ನು ಕೇಂದ್ರ ಗೃಹಸಚಿವ ಅಮಿತ್ ಶಾ, ಪ್ರಧಾನಿ ಕಚೇರಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಕಳುಹಿಸಲಾಗಿದೆ. ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಮಹತೋ ಆಯ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಹತೋ ಉಮೇದುವಾರಿಕೆಯನ್ನು ವಿರೋಧಿಸಿ ಧನಬಾದ್ನ ಉದ್ಯಮ ಸಮುದಾಯದ ಪರವಾಗಿ ಧನಬಾದ್ ಜಿಲ್ಲಾ ಮಾರ್ವಾಡಿ ಸಮ್ಮೇಳನದ ಅಧ್ಯಕ್ಷ ಕೃಷ್ಣ ಅಗರ್ವಾಲ್ ಅವರು ಮಾಜಿ ಮುಖ್ಯಮಂತ್ರಿಯೂ ಆಗಿರುವ ಮರಾಂಡಿಯವರಿಗೆ ಬರೆದಿರುವ ಪತ್ರದಲ್ಲಿ,ಧನಬಾದ್ನಿಂದ ಅಭ್ಯರ್ಥಿಯಾಗಿ ಮಹತೋ ಹೆಸರನ್ನು ಪ್ರಕಟಿಸಿದ ಬಳಿಕ ಉದ್ಯಮ ಸಮುದಾಯವು ಭೀತಿಗೆ ಸಿಲುಕಿದೆ ಎಂದು ಆರೋಪಿಸಿದ್ದಾರೆ. ಈ ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಅವರು ಕೋರಿಕೊಂಡಿದ್ದಾರೆ.

ಅಗರ್ವಾಲ್ ಹೇಳಿಕೆಯಂತೆ ಮಹತೋ ವಿರುದ್ಧ ಭೂಕಬಳಿಕೆ, ಹಫ್ತಾ ವಸೂಲಿ ಮತ್ತು ಕಲ್ಲಿದ್ದಲು ಕಳ್ಳಸಾಗಣೆಯಂತಹ ಮೂರು ಡಜನ್ಗೂ ಅಧಿಕ ಪ್ರಕರಣಗಳು ಈಗಲೂ ಬಾಕಿಯಿದ್ದು ಮಾರ್ವಾಡಿ ಸಮುದಾಯದ ಉದ್ಯಮಿಗಳು ಮತ್ತು ಧನಬಾದ್ನ ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ನಾಲ್ಕು ಪ್ರಕರಣಗಳಲ್ಲಿ ಮಹತೋಗೆ 18 ತಿಂಗಳುಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News