ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆಯಿರಬೇಕು: ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್‌

Update: 2024-04-18 07:41 GMT

ಹೊಸದಿಲ್ಲಿ: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆಯಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್‌ ಹೇಳಿದೆಯಲ್ಲದೆ ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತ್ರಿಪಡಿಸಲು ಕೈಗೊಂಡ ಕ್ರಮಗಳ ವಿವರ ನೀಡುವಂತೆಯೂ ಆಯೋಗಕ್ಕೆ ಸೂಚಿಸಿದೆ.

“ಇದು ಚುನಾವಣಾ ಪ್ರಕ್ರಿಯೆ. ಪಾವಿತ್ರ್ಯತೆ ಇರಬೇಕು. ನಿರೀಕ್ಷಿಸಿದ್ದನ್ನು ಮಾಡಲಾಗುತ್ತಿಲ್ಲ ಎಂದು ಯಾರೂ ಆತಂಕ ಹೊಂದಿರದಂತೆ ನೋಡಿಕೊಳ್ಳಿ,” ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಾಂಕರ್‌ ದತ್ತಾ ಅವರ ಪೀಠ ಹೇಳಿದೆ.

ಇವಿಎಂನಲ್ಲಿ ಚಲಾಯಿಸಿದ ಮತಗಳನ್ನು ವಿವಿಪ್ಯಾಟ್‌ ಮೂಲಕ ದೊರೆಯುವ ಪೇಪರ್‌ ಸ್ಲಿಪ್‌ಗಳ ಜೊತೆ ತಾಳೆಯಾಗುವಂತೆ ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

ಚುನಾವಣಾ ಆಯೋಗದ ವಕೀಲರಾದ ಮಣೀಂದರ್‌ ಸಿಂಗ್‌ ಮತ್ತು ಆಯೋಗದ ಅಧಿಕಾರಿಗಳು ಇಂದು ಸುಪ್ರೀಂ ಕೋರ್ಟ್‌ ಮಂದೆ ಹಾಜರಾಗಿದ್ದಾರೆ.

ಅರ್ಜಿದಾರರ ಪರ ವಕೀಲರಾದ ನಿಜಾಂ ಪಾಷಾ ಮಾತನಾಡಿ ಮತದಾನ ಮಾಡಿದ ನಂತರ ವಿವಿಪ್ಯಾಟ್‌ ಸ್ಲಿಪ್‌ ಕೊಂಡೊಯ್ಯಲು ಮತದಾರರಿಗೆ ಅನುಮತಿಸಬೇಕೆಂದರು. ಇದು ಮತದಾರರ ಗೌಪ್ಯತೆಯನ್ನು ಬಾಧಿಸುವುದಿಲ್ಲವೇ ಎಂದು ಜಸ್ಟಿಸ್‌ ಖನ್ನಾ ಪ್ರಶ್ನಿಸಿದಾಗ “ಮತದಾರರ ಗೌಪ್ಯತೆಯನ್ನು ಮತದಾರರ ಹಕ್ಕುಗಳನ್ನು ಸೋಲಿಸಲು ಬಳಸಬಾರದು” ಎಂದು ಹೇಳಿದರು.

ವಿವಿಪ್ಯಾಟ್‌ ಯಂತ್ರದ ಬೆಳಕು ಸದಾ ಆನ್‌ ಆಗಿರಬೇಕು, ಈಗ ಅದು ಕೇವಲ 7 ಸೆಕೆಂಡ್‌ಗಳ ತನಕ ಮಾತ್ರ ಕಾಣಿಸುತ್ತದೆ ಎಂದು ವಕೀಲ ಪ್ರಶಾಂತ್‌ ಭೂಷಣ್‌ ಹೇಳಿದರು. “ಒಂದು ಸಂಭಾವ್ಯ ಪರಿಹಾರವೆಂದರೆ, ಈ ಹಂತದಲ್ಲಿ ಗಾಜನ್ನು ಬದಲಾಯಿಸಲಾಗದೇ ಇದ್ದರೂ ಲೈಟ್‌ ಸದಾ ಇರಬೇಕು, ಇದರಿಂದ ಮತದಾನ ಚೀಟಿ ತುಂಡಾಗಿ ಕೆಳಗೆ ಪೆಟ್ಟಿಗೆಗೆ ಸೇರುವುದು ಕಾಣಿಸುತ್ತದೆ. ಆಗ ಗೌಪ್ಯತೆ ಬಾಧಿತವಾಗದು,” ಎಂದು ಹೇಳಿದರು.

ಮತ ಎಣಿಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ವಿಶ್ವಾಸಾರ್ಹತೆಗೆ ಪ್ರತ್ಯೇಕ ಆಡಿಟ್‌ ಇರಬೇಕೆಂದು ಅರ್ಜಿದಾರರ ಪರ ಇನ್ನೋರ್ವ ವಕೀಲ ಸಂಜಯ್‌ ಹೆಗ್ಡೆ ಹೇಳಿದರು.

ಕೇರಳದಲ್ಲಿ ಅಣಕು ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಗೆ ಹೆಚ್ಚುವರಿ ಮತಗಳು ಬಿದ್ದ ಉದಾಹರಣೆಯನ್ನು ಭೂಷಣ್ ನೀಡಿದಾಗ ಈ ಕುರಿತು ವಿವರಿಸುವಂತೆ ಆಯೋಗದ ವಕೀಲರಿಗೆ ನ್ಯಾಯಾಲಯ ಹೇಳಿತು.

ಮತದಾನ ನಡೆಯುವ ಮುಂಚೆ ಯಂತ್ರಗಳನ್ನು ಇಂಜಿನಿಯರ್‌ಗಳ ಉಪಸ್ಥಿತಿಯಲ್ಲಿ ಪರೀಕ್ಷಿಸಲಾಗುತ್ತದೆ. ವಿವಿಪ್ಯಾಟ್‌ ಪ್ರಿಂಟರ್‌ನಲ್ಲಿ ಸಾಫ್ಟ್‌ವೇರ್‌ ಇಲ್ಲ ಎಂದು ಆಯೋಗದ ಅಧಿಕಾರಿಗಳು ಹೇಳಿದರು.

ಮತದಾನಕ್ಕೆ ಎಷ್ಟು ಚಿಹ್ನೆ ಲೋಡಿಂಗ್‌ ಯುನಿಟ್‌ಗಳನ್ನು ರಚಿಸಲಾಗುತ್ತದೆ ಎಂದು ಕೇಳಿದಾಗ. ಒಂದು ಕ್ಷೇತ್ರಕ್ಕೆ ಒಂದು ಅದು ಮತದಾನ ಮುಗಿಯುವ ತನಕ ರಿಟರ್ನಿಂಗ್‌ ಅಧಿಕಾರಿಗಳ ಬಳಿ ಇರುತ್ತದೆ ಎಂದು ಅಧಿಕಾರಿಗಳು ಹೇಳಿದರು. ಈ ಯೂನಿಟ್‌ ತಿರುಚಲಾಗದಂತೆ ಸೀಲ್‌ ಮಾಡಲಾಗುತ್ತದೆಯೇ ಎಂದು ಕೋರ್ಟ್‌ ಕೇಳಿದಾಗ ಅಂತಹ ಪ್ರಕ್ರಿಯೆ ಈಗ ಇಲ್ಲ ಎಂದು ಅಧಿಕಾರಿಗಳು ಹೇಳಿದರು.

ಎಲ್ಲಾ ಮತ ಯಂತ್ರಗಳು ಅಣಕು ಮತ ಪ್ರಕ್ರಿಯೆಯ ಮೂಲಕ ಹಾದು ಹೋಗುತ್ತವೆ. ಮತಯಂತ್ರಗಳು ಫರ್ಮ್‌ವೇರ್‌ ಮೇಲೆ ಕಾರ್ಯಾಚರಿಸುತ್ತವೆ, ಪ್ರೋಗ್ರಾಂ ಬದಲಿಸಲಾಗದು, ಯಂತ್ರಗಳನ್ನು ಸ್ಟ್ರಾಂಗ್‌ರೂಮ್‌ಗಳಲ್ಲಿ ಇರಿಸಲಾಗುತ್ತದೆ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಬೀಗ ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News