Fact Check: ಅಯೋಧ್ಯೆ ಸಮಾರಂಭದ ವೇಳೆ ಬುರ್ಜ್‌ ಖಲೀಫಾದಲ್ಲಿ ರಾಮನ ಚಿತ್ರ ಬಿಂಬಿಸಲಾಗಿತ್ತೆಂಬ ನಕಲಿ ಪೋಸ್ಟರ್ ವೈರಲ್‌

Update: 2024-01-23 06:41 GMT

ದುಬೈ: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ದುಬೈಯ ಬುರ್ಜ್‌ ಖಲೀಫಾದಲ್ಲಿ ಶ್ರೀ ರಾಮ ದೇವರ ಚಿತ್ರವನ್ನು ಬಿಂಬಿಸಲಾಗಿರುವ ಫೋಟೋ ಒಂದು ವೈರಲ್‌ ಆಗಿದೆ. ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀ ರಾಮನ ಚಿತ್ರವನ್ನು ಬಿಂಬಿಸಲಾಗಿದೆ ಎಂದೂ ವೈರಲ್‌ ಪೋಸ್ಟ್‌ನಲ್ಲಿ ಹೇಳಲಾಗಿತ್ತು. 

ಮಂಗಳವಾರದ ಉದಯವಾಣಿ ದಿನಪತ್ರಿಕೆಯಲ್ಲೂ ಇದೇ ರೀತಿಯಲ್ಲಿ ಸುದ್ದಿ ಪ್ರಕಟವಾಗಿದೆ. 

 

ಆದರೆ ವಾಸ್ತವ ಚಿತ್ರಣ ಬೇರೆಯೇ ಆಗಿದೆ. ಅಯೋಧ್ಯೆಯ ಸಮಾರಂಭದ ಹಿನ್ನೆಲೆಯಲ್ಲಿ ಬುರ್ಜ್‌ ಖಲೀಫಾ ಕಟ್ಟಡದಲ್ಲಿ ರಾಮನ ಚಿತ್ರ ಬಿಂಬಿಸಲಾಗಿಲ್ಲ. ವೈರಲ್‌ ಫೋಟೋ ಅನ್ನು ಬುರ್ಜ್‌ ಖಲೀಫಾದ ಸ್ಟಾಕ್‌ ಫೋಟೋ ಬಳಸಿಕೊಂಡು ಅದರ ಮೇಲೆ ಶ್ರೀ ರಾಮ ದೇವರ ಚಿತ್ರ ಸೂಪರ್‌ಇಂಪೋಸ್‌ ಮಾಡಲಾಗಿದೆ.

ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದಾಗ ಈ ವೈರಲ್‌ ಫೋಟೋದಲ್ಲಿರುವ ಬುರ್ಜ್‌ ಖಲೀಫಾದ ಚಿತ್ರ ದೊರಕಿದೆ. ಆ ಫೋಟೋದ ಸುತ್ತಲೂ ಇರುವ ಚಿತ್ರಣ ಹಾಗೂ ವೈರಲ್‌ ಫೋಟೋದಲ್ಲಿರುವ ಬುರ್ಜ್‌ ಖಲೀಫಾ ಕಟ್ಟಡದ ಸುತ್ತಲಿನ ಚಿತ್ರಣ ಮತ್ತು ಬೆಳಕು ಒಂದೇ ಆಗಿದೆ.

ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಚಿತ್ರಣಗಳನ್ನು ಮೂಡಿಸಿದಾಗ ಅದರ ಕುರಿತು ಮಾಹಿತಿಯನ್ನು ಬುರ್ಜ್‌ ಖಲೀಫಾದ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ನೀಡಲಾಗುತ್ತದೆ.

ಕಳೆದ ವರ್ಷದ ಎಪ್ರಿಲ್‌ ತಿಂಗಳಿನಲ್ಲೂ ಇದೇ ರೀತಿಯ ನಕಲಿ ಫೋಟೋ ಒಂದು ವೈರಲ್‌ ಆಗಿತ್ತಲ್ಲದೆ ರಾಮ ನವಮಿ ಸಂದರ್ಭ ರಾಮನ ಚಿತ್ರವನ್ನು ಬುರ್ಜ್‌ ಖಲೀಫಾದಲ್ಲಿ ಬಿಂಬಿಸಲಾಗಿದೆ ಎಂಬ ನಕಲಿ ಪೋಸ್ಟ್‌ ಸುದ್ದಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News