ಕೋವಿಂದ್ ಸಮಿತಿ ವರದಿ ಸಲ್ಲಿಕೆ | ಏಕಕಾಲಿಕ ಚುನಾವಣೆಗೆ ಮೂವರು ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಓರ್ವ ರಾಜ್ಯ ಚುನಾವಣಾ ಆಯುಕ್ತರ ವಿರೋಧ

Update: 2024-03-14 17:08 GMT

Photo : PTI

ಹೊಸದಿಲ್ಲಿ : ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ನಡೆಸಿದ ಸಮಾಲೋಚನೆಗಳ ಸಂದರ್ಭದಲ್ಲಿ ‘ಒಂದು ರಾಷ್ಟ್ರ,ಒಂದು ಚುನಾವಣೆ’ಯ ಪರಿಕಲ್ಪನೆಯನ್ನು ವಿರೋಧಿಸಿದವರಲ್ಲಿ ಮೂವರು ಮಾಜಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ಓರ್ವ ಮಾಜಿ ರಾಜ್ಯ ಚುನಾವಣಾ ಆಯುಕ್ತರು ಸೇರಿದ್ದಾರೆ.

ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ವರದಿಯನ್ನು ಸಲ್ಲಿಸಿರುವ ಸಮಿತಿಯು ಮೊದಲ ಹೆಜ್ಜೆಯಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಿಕ ಚುನಾವಣೆಗಳನ್ನು ಮತ್ತು ನಂತರ ನೂರು ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲಿಕ ಚುನಾವಣೆಗಳನ್ನು ಶಿಫಾರಸು ಮಾಡಿದೆ.

ವರದಿಯ ಪ್ರಕಾರ ಸಮಿತಿಯು ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ನ್ಯಾ.ದೀಪಕ್ ಮಿಶ್ರಾ, ನ್ಯಾ.ರಂಜನ ಗೊಗೊಯಿ, ನ್ಯಾ.ಎಸ್.ಎ.ಬೋಬ್ಡೆ ಮತ್ತು ನ್ಯಾ.ಯುಯು ಲಲಿತ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಎಲ್ಲ ನಾಲ್ವರೂ ಏಕಕಾಲಿಕ ಚುನಾವಣೆಗಳನ್ನು ಬೆಂಬಲಿಸಿದ್ದಾರೆ.

ಪ್ರಮುಖ ಉಚ್ಛ ನ್ಯಾಯಾಲಯಗಳ ಮಾಜಿ ಮುಖ್ಯ ನ್ಯಾಯಾಧೀಶರ ಪೈಕಿ ಏಕಕಾಲಿಕ ಚುನಾವಣೆಗಳನ್ನು ಬೆಂಬಲಿಸಿರುವ ಒಂಭತ್ತು ಜನರು ಅದರ ಸಂಭಾವ್ಯ ಪ್ರಯೋಜನಗಳನ್ನು ಎತ್ತಿ ತೋರಿಸಿದ್ದಾರೆ ಮತ್ತು ಮೂವರು ಕಳವಳಗಳನ್ನು ಅಥವಾ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.

ಏಕಕಾಲಿಕ ಚುನಾವಣೆಗಳ ಪರಿಕಲ್ಪನೆಯನ್ನು ವಿರೋಧಿಸಿರುವ ದಿಲ್ಲಿ ಉಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ಅಜಿತ್ ಪ್ರಕಾಶ್ ಶಾ ಅವರು, ಅದು ಪ್ರಜಾಸತ್ತಾತ್ಮಕ ಅಭಿವ್ಯಕ್ತಿಯನ್ನು ನಿಗ್ರಹಿಸಬಹುದು ಎಂದು ಬೆಟ್ಟು ಮಾಡಿದ್ದಾರೆ. ವಿಕೃತ ಮತದಾನ ಮಾದರಿಗಳು ಮತ್ತು ರಾಜ್ಯಮಟ್ಟದಲ್ಲಿ ರಾಜಕೀಯ ಬದಲಾವಣೆಗಳ ಬಗ್ಗೆ ಅವರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ನಿಗದಿತ ಅವಧಿಗಳು ಜನಪ್ರತಿನಿಧಿಗಳಿಗೆ ಅವರ ಕಾರ್ಯಕ್ಷಮತೆಯ ಪರಿಶೀಲನೆಯಿಲ್ಲದೆ ಅನಗತ್ಯ ಸ್ಥಿರತೆಯನ್ನು ಒದಗಿಸುವುದರಿಂದ ಏಕಕಾಲಿಕ ಚುನಾವಣೆಗಳು ರಾಜಕೀಯ ಉತ್ತರದಾಯಿತ್ವಕ್ಕೆ ಅಡ್ಡಿಯಾಗುತ್ತವೆ ಮತ್ತು ಇದು ಪ್ರಜಾಸತ್ತಾತ್ಮಕ ತತ್ವಗಳಿಗೆ ಸವಾಲನ್ನೊಡ್ಡುತ್ತದೆ ಎಂದೂ ಅವರು ಹೇಳಿದ್ದಾಗಿ ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.

ಏಕಕಾಲಿಕ ಚುನಾವಣೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಕಲಕತ್ತಾ ಉಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾ.ಗಿರೀಶ್ ಚಂದ್ರ ಗುಪ್ತಾ ಅವರು,ಈ ಪರಿಕಲ್ಪನೆಯು ಪ್ರಜಾಪ್ರಭುತ್ವದ ನೀತಿಗಳಿಗೆ ಪೂರಕವಾಗಿಲ್ಲ ಎಂದು ಹೇಳಿದ್ದಾರೆ.

ಏಕಕಾಲಿಕ ಚುನಾವಣೆಯು ಭಾರತದ ಒಕ್ಕೂಟ ಸ್ವರೂಪವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರಾದೇಶಿಕ ವಿಷಯಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಕಳವಳಗಳನ್ನು ವ್ಯಕ್ತಪಡಿಸಿರುವ ಮದ್ರಾಸ್ ಉಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾ.ಸಂಜೀವ್ ಬ್ಯಾನರ್ಜಿಯವರು ಅದನ್ನು ವಿರೋಧಿಸಿದ್ದಾರೆ.

ಸಮಿತಿಯು ಸಮಾಲೋಚನೆ ನಡೆಸಿದ್ದ ಎಲ್ಲ ನಾಲ್ವರು ಮಾಜಿ ಮುಖ್ಯ ಚುನಾವಣಾ ಆಯುಕ್ತರು ಏಕಕಾಲಿಕ ಚುನಾವಣೆಗಳನ್ನು ಬೆಂಬಲಿಸಿದ್ದಾರೆ.

ಸಮಿತಿಯು ಸಮಾಲೋಚಿಸಿದ್ದ ಹಾಲಿ ಮತ್ತು ಮಾಜಿ ಚುನಾವಣಾ ಆಯುಕ್ತರ ಪೈಕಿ ಏಳು ಜನರು ಏಕಕಾಲಿಕ ಚುನಾವಣೆಗಳನ್ನು ಬೆಂಬಲಿಸಿದ್ದರೆ ಮಾಜಿ ತಮಿಳುನಾಡು ರಾಜ್ಯ ಚುನಾವಣಾ ಆಯುಕ್ತ ವಿ.ಪಳನಿಕುಮಾರ್ ಅವರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ಚುನಾವಣೆಗಳ ಸಂದರ್ಭದಲ್ಲಿ ಸ್ಥಳೀಯ ಪರಿಗಣನೆಗಳಿಗಿಂತ ರಾಷ್ಟ್ರೀಯ ವಿಷಯಗಳ ವ್ಯಾಪಕ ಪ್ರಾಬಲ್ಯವು ಪ್ರಮುಖ ಪ್ರಾಥಮಿಕ ಕಾಳಜಿಯಾಗಿದೆ. ಈ ಪ್ರವೃತ್ತಿಯು ಪ್ರದೇಶ-ನಿರ್ದಿಷ್ಟ ಸವಾಲುಗಳ ಮೇಲಿನ ಗಮನವನ್ನು ದುರ್ಬಲಗೊಳಿಸುವ ಮತ್ತು ಸ್ಥಳೀಯಾಡಳಿತದ ಪರಿಣಾಮಕಾರಿತ್ವವನ್ನು ಕುಗ್ಗಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಚುನಾವಣಾ ಸಿಬ್ಬಂದಿ ಕೊರತೆಯ ತೀವ್ರ ಸಮಸ್ಯೆಯನ್ನೂ ಅವರು ಎತ್ತಿ ತೋರಿಸಿದ್ದಾರೆ. ಚುನಾವಣೆಗಳನ್ನು ಸುಗಮವಾಗಿ ಮತ್ತು ಸಮರ್ಥವಾಗಿ ಕಾರ್ಯಗತಗೊಳಿಸಲು ಸಿಬ್ಬಂದಿ ಬಲವನ್ನು ಹೆಚ್ಚಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದ್ದಾರೆ ಎಂದು ಸಮಿತಿಯು ತನ್ನ ವರದಿಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News