ವಿನೇಶ್ ಫೋಗಟ್ ಗೆ ಭಾರತ ರತ್ನ ಅಥವಾ ರಾಜ್ಯಸಭಾ ಸ್ಥಾನ ನೀಡಲು ಟಿಎಂಸಿ ಆಗ್ರಹ
ಹೊಸದಿಲ್ಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಅಥವಾ ರಾಷ್ಟ್ರಪತಿಗಳು ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಬೇಕು ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ಅದೃಷ್ಟದ ಆಘಾತಕಾರಿ ಬದಲಾವಣೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನ ಕುಸ್ತಿಸ್ಪರ್ಧೆಯ 50 ಕೆಜಿ.ವಿಭಾಗದಲ್ಲಿ ಫೈನಲ್ ತಲುಪಿದ್ದ ಫೋಗಟ್ ಹೆಚ್ಚುವರಿ 100 ಗ್ರಾಂ ದೇಹತೂಕ ಹೊಂದಿದ್ದಕ್ಕಾಗಿ ಅನರ್ಹಗೊಂಡಿದ್ದಾರೆ.
‘ಒಮ್ಮತವನ್ನು ರೂಪಿಸಲು ಸರಕಾರ ಮತ್ತು ಪ್ರತಿಪಕ್ಷಗಳು ಮಾರ್ಗವೊಂದನ್ನು ಕಂಡುಕೊಳ್ಳಬೇಕು ಹಾಗೂ ಫೋಗಟ್ ಪ್ರದರ್ಶಿಸಿದ್ದ ಅದ್ಭುತ ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಅಥವಾ ರಾಷ್ಟ್ರಪತಿಗಳು ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಬೇಕು. ಫೋಗಟ್ ನಡೆಸಿದ್ದ ಅಪಾರ ಹೋರಾಟವನ್ನು ಪರಿಗಣಿಸಿ ಇದು ನಾವು ಅವರಿಗಾಗಿ ಮಾಡಬಹುದಾದ ಕನಿಷ್ಠ ಕೆಲಸವಾಗಿದೆ. ಯಾವುದೇ ಪದಕವು ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ ’ ಎಂದು ಬ್ಯಾನರ್ಜಿ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಫೋಗಟ್ ಹಿನ್ನಡೆ ತೀವ್ರ ನೋವನ್ನುಂಟು ಮಾಡಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು, ಅವರು ಭಾರತದ 140 ಕೋಟಿ ಗೂ.ಹೆಚ್ಚಿನ ಜನರ ಪಾಲಿಗೆ ಚಾಂಪಿಯನ್ ಗಳಲ್ಲಿ ಚಾಂಪಿಯನ್ ಆಗಿದ್ದಾರೆ ಮತ್ತು ದೇಶದ ಹೆಮ್ಮೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಉತ್ತರದಾಯಿತ್ವವನ್ನು ನಿಗದಿಗೊಳಿಸಬೇಕು ಮತ್ತು ಫೋಗಟ್ ಅನರ್ಹತೆ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹಲವಾರು ಪ್ರತಿಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.