ಪಶ್ಚಿಮ ಬಂಗಾಳ: ಟಿಎಂಸಿ ನಾಯಕನ ಗುಂಡಿಕ್ಕಿ ಹತ್ಯೆ; ಓರ್ವ ದುಷ್ಕರ್ಮಿಯನ್ನು ಥಳಿಸಿ ಕೊಂದ ಬೆಂಬಲಿಗರು
ಕೋಲ್ಕತಾ: ಪ.ಬಂಗಾಳದ ದಕ್ಷಿಣ 24 ಪರಗಣಗಳ ಜಿಲ್ಲೆಯ ಜಾಯ್ ನಗರದಲ್ಲಿ ಸೋಮವಾರ ಬೆಳಿಗ್ಗೆ ದುಷ್ಕರ್ಮಿಗಳು ಸ್ಥಳೀಯ ಟಿಎಂಸಿ ನಾಯಕನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಗುಂಪು ದುಷ್ಕರ್ಮಿಗಳ ಪೈಕಿ ಓರ್ವನನ್ನು ಥಳಿಸಿ ಕೊಂದಿದೆ.
ಜಾಯ್ನಗರದ ಬಮುಂಗಾಚಿ ಪ್ರದೇಶದ ಟಿಎಂಸಿ ಅಧ್ಯಕ್ಷ ಸೈಫುದ್ದೀನ್ ಲಸ್ಕರ್ ಅವರನ್ನು ಅವರ ಮನೆಯ ಸಮೀಪ ಕೆಲವು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಲಸ್ಕರ್ ಬೆಂಬಲಿಗರು ಓರ್ವ ದುಷ್ಕರ್ಮಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಆತನನ್ನು ಥಳಿಸಿ ಕೊಂದಿದ್ದಾರೆ. ಲಸ್ಕರ್ ಪತ್ನಿ ಸ್ಥಳೀಯ ಪಂಚಾಯತ್ ಪ್ರಧಾನರಾಗಿದ್ದಾರೆ.
ಲಸ್ಕರ್ ಹತ್ಯೆಯ ಹಿಂದೆ ಸಿಪಿಎಂ ಬೆಂಬಲಿಗರಿದ್ದಾರೆ ಎಂದು ಸ್ಥಳೀಯ ಟಿಎಂಸಿ ನಾಯಕರು ಆರೋಪಿಸಿದ್ದಾರೆ.
ಘಟನೆಯ ಬಳಿಕ ಲಸ್ಕರ್ ಬೆಂಬಲಿಗರು ತಮ್ಮ ಮನೆಗಳಿಗೆ ನುಗ್ಗಿ ಲೂಟಿ ಮಾಡಿದ್ದಾರೆ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸಮೀಪದ ಪ್ರದೇಶಗಳಲ್ಲಿಯ ಸಿಪಿಎಂ ಬೆಂಬಲಿಗರು ಹೇಳಿದ್ದಾರೆ.
ಪೋಲಿಸರು ಸೂಕ್ತ ತನಿಖೆಯನ್ನು ನಡೆಸಿ ಹಂತಕರನ್ನು ಬಂಧಿಸಬೇಕು ಮತ್ತು ಒಳಸಂಚನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿರುವ ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿಯವರು,ಲಸ್ಕರ್ ಹತ್ಯೆಯು ಟಿಎಂಸಿಯಲ್ಲಿನ ಆಂತರಿಕ ಕಚ್ಚಾಟದ ಫಲಶ್ರುತಿಯಾಗಿದೆ, ಸಿಪಿಎಂನ್ನು ದೂರುವುದು ನಿರರ್ಥಕ ಎಂದಿದ್ದಾರೆ.