ವಿಧೇಯಕಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ: ರಾಜ್ಯಪಾಲ ಆರ್‌.ಎನ್. ರವಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ತಮಿಳುನಾಡು ಸರ್ಕಾರ

Update: 2023-10-31 15:22 GMT

ರಾಜ್ಯಪಾಲ ಆರ್‌ಎನ್ ರವಿ

ಚೆನ್ನೈ: ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡುತ್ತಿರುವ ಸಂಬಂಧ ರಾಜ್ಯಪಾಲ ಆರ್‌ಎನ್ ರವಿ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ರಾಜ್ಯಪಾಲ ರವಿ ಅವರು ತನ್ನನ್ನು "ಕಾನೂನುಬದ್ಧವಾಗಿ ಚುನಾಯಿತ ಸರ್ಕಾರಕ್ಕೆ ರಾಜಕೀಯ ಪ್ರತಿಸ್ಪರ್ಧಿ" ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಮಿಳುನಾಡು ಸರ್ಕಾರವು ಹೇಳಿಕೊಂಡಿದೆ.

ಇದಲ್ಲದೆ, ರಾಜ್ಯಪಾಲರು ಪರಿಹಾರ ಆದೇಶಗಳು, ದೈನಂದಿನ ಕಡತಗಳು ಮತ್ತು ನೇಮಕಾತಿ ಆದೇಶಗಳಿಗೆ ಸಹಿ ಹಾಕಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ನೇಮಕಾತಿ ಆದೇಶಗಳನ್ನು ಅನುಮೋದಿಸಲು ವಿಳಂಬವಾಗುತ್ತಿದೆ, ಭ್ರಷ್ಟಾಚಾರದಲ್ಲಿ ತೊಡಗಿರುವ ಶಾಸಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮೋದನೆ ನೀಡಲು ಸಹ ವಿಳಂಬವಾಗುತ್ತಿದೆ ಎಂದು ಎಂ.ಕೆ. ಸ್ಟಾಲಿನ್‌ ನೇತೃತ್ವದ ಸರ್ಕಾರ ಆರೋಪಿದೆ.

ಈ ನಿಟ್ಟಿನಲ್ಲಿ ಬಾಕಿ ಉಳಿದಿರುವ ಮಸೂದೆಗಳಿಗೆ ರಾಜ್ಯಪಾಲರು ತಮ್ಮ ಅನುಮೋದನೆ ಒದಗಿಸಲು ಮತ್ತು ಬಾಕಿ ಉಳಿದಿರುವ ಆದೇಶಗಳಿಗೆ ಸಹಿ ಹಾಕಲು ಕಾಲಮಿತಿಯನ್ನು ನಿಗದಿಪಡಿಸಬೇಕೆಂದು ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನಗಳನ್ನು ಕೋರಿದೆ.

"ರಾಜ್ಯಪಾಲರ ಸಹಿಗಾಗಿ ರಾಜ್ಯ ಸರ್ಕಾರವು ರವಾನಿಸಿದ ಕಡತಗಳು, ಸರ್ಕಾರಿ ಆದೇಶಗಳು ಮತ್ತು ನೀತಿಗಳನ್ನು ಪರಿಗಣಿಸದಿರುವುದು ಅಸಾಂವಿಧಾನಿಕ, ಕಾನೂನುಬಾಹಿರ ಮತ್ತು ಅಧಿಕಾರದ ದುರುಪಯೋಗ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ನ್ಯಾಯಸಮ್ಮತವಾಗಿ ಚುನಾಯಿತ ಸರ್ಕಾರಕ್ಕೆ ರಾಜ್ಯಪಾಲರು ತನ್ನನ್ನು ತಾನು ರಾಜಕೀಯ ಪ್ರತಿಸ್ಪರ್ಧಿ ಎಂಬಂತೆ ಬಿಂಬಿಸಿಕೊಂಡಿದ್ದಾರೆ.

"ರಾಜ್ಯಪಾಲರ ನಿಷ್ಕ್ರಿಯತೆಯು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥ ಮತ್ತು ರಾಜ್ಯದ ಚುನಾಯಿತ ಸರ್ಕಾರದ ನಡುವೆ ಸಾಂವಿಧಾನಿಕ ಬಿಕ್ಕಟ್ಟನ್ನು ಉಂಟುಮಾಡಿದೆ. ತನ್ನ ಸಾಂವಿಧಾನಿಕ ಕಾರ್ಯಗಳ ಮೇಲೆ ಕಾರ್ಯನಿರ್ವಹಿಸದೆ ರಾಜ್ಯಪಾಲರು ನಾಗರಿಕರ ಆದೇಶವನ್ನು ಕಸಿದುಕೊಳ್ಳುತ್ತಿದ್ದಾರೆ.” ಎಂದು ತಮಿಳುನಾಡು ಸರ್ಕಾರ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News