ತ.ನಾ.: ದಲಿತ ಮಹಿಳೆ ಬೇಯಿಸಿದ ಉಪಹಾರ ಸೇವಿಸಲು ವಿದ್ಯಾರ್ಥಿಗಳು ನಿರಾಕರಣೆ
ಚೆನ್ನೈ, ಸೆ. 6: ತಮಿಳುನಾಡು ಸರಕಾರ ರಾಜ್ಯದ ಶಾಲಾ ಮಕ್ಕಳಿಗೆ ಉಚಿತ ಬೆಳಗ್ಗಿನ ಉಪಹಾರ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ನಡುವೆ, ಕರೂರು ಸರಕಾರಿ ಶಾಲೆಯಲ್ಲಿ ದಲಿತ ಮಹಿಳೆ ಅಡುಗೆ ಮಾಡಿರುವ ಕಾರಣಕ್ಕೆ ಅರ್ಥಕ್ಕಿಂತ ಹೆಚ್ಚಿನ ಮಕ್ಕಳು ಆಹಾರ ಸೇವಿಸಲು ನಿರಾಕರಿಸಿದ್ದಾರೆ.
ಕರೂರು ಜಿಲ್ಲೆಯ ಅರವಕುರಿಚಿ ಸಮೀಪದ ವೆಲಂಚೆಟ್ಟಿಯಾರ್‌ನಲ್ಲಿ ಇರುವ ಪಂಚಾಯತ್ ಯೂನಿಯನ್ ಪೈಮರಿ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.
ಹಿಂದುಳಿದ ಜಾತಿ ಹಾಗೂ ಅತಿ ಹಿಂದುಳಿದ ಜಾತಿಗೆ ಸೇರಿದ ಕೆಲವರು ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ನಿರಾಕರಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಬೇಯಿಸಿದ ಆಹಾರ ಸೇವಿಸದಂತೆ ತಡೆ ಒಡ್ಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಟಿ. ಪ್ರಭು ಶಂಕರ್ ಶಾಲೆಗೆ ಭೇಟಿ ನೀಡಿ ಆಹಾರವನ್ನು ಸೇವಿಸಿದ್ದಾರೆ. ಅವರು ವಿದ್ಯಾರ್ಥಿಗಳ ಹೆತ್ತವರನ್ನು ಭೇಟಿಯಾಗಿದ್ದಾರೆ. ಸರಕಾರಿ ನಿಯೋಜಿತ ಅಡುಗೆಯವರ ವಿರುದ್ಧ ತಾರತಮ್ಯ ಮುಂದುವರಿಸಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ.
ದಲಿತ ಮಹಿಳೆ ಆಹಾರ ತಯಾರಿಸುವುದನ್ನು ಮೂರಕ್ಕೂ ಅಧಿಕ ಹಿಂದುಳಿದ ಸಮುದಾಯಗಳು ವಿರೋಧಿಸಿವೆ ಹಾಗೂ ಅವರಿಗೆ ಬಹಿಷ್ಕಾರ ಹಾಕಿವೆ.
ಜಿಲ್ಲಾಧಿಕಾರಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಹೆಚ್ಚಿನವರು ತಮ್ಮ ಮಕ್ಕಳು ಉಪಹಾರ ಸೇವಿಸುವುದಕ್ಕೆ ಅನುಮತಿ ನೀಡಿದ್ದಾರೆ. ಆದರೆ, ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೋರ್ವ ಅನುಮತಿ ನೀಡಿಲ್ಲ. ಆತ ತನ್ನ ಮಕ್ಕಳಿಗೆ ಆಹಾರ ಸೇವಿಸಲು ಬಿಡುವುದಿಲ್ಲ ಎಂದು ಹೇಳಿದ್ದಾನೆ.
ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಲಾಯಿತು. ದಲಿತ ಮಹಿಳೆಯ ವಿರುದ್ಧ ಜಾತಿ ತಾರತಮ್ಯ ಅನುಸರಿಸಿದರೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಲಾಯಿತು.
ಜನರು ಆದೇಶವನ್ನು ಅನುಸರಿಸಲು ವಿಫಲವಾದರೆ, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.