ಕರ್ನಾಟಕ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಇನ್ನೊಂದು ನಗೆಪಾಟಲು ಪ್ರಯತ್ನ ಮಾಡುತ್ತಿದೆ: ಕಾಂಗ್ರೆಸ್
ಹೊಸದಿಲ್ಲಿ: ಕರ್ನಾಟಕ ಬಿಜೆಪಿಯು ರಾಜ್ಯದಲ್ಲಿನ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ. ಬಿಜೆಪಿ ನಾಯಕರ ತಂಡವೊಂದು ಕರ್ನಾಟಕದಲ್ಲಿಯ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮಂಡ್ಯ ಶಾಸಕ ರವಿ ಗಣಿಗ ಅವರು ಶುಕ್ರವಾರ ಆರೋಪಿಸುವ ಮೂಲಕ ವಿವಾದ ಸೃಷ್ಟಿಸಿದ್ದರು.
ಬಿಜೆಪಿ ನಾಯಕರು ಪಕ್ಷಾಂತರಕ್ಕಾಗಿ ಕಾಂಗ್ರೆಸ್ ಶಾಸಕರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂಬ ರವಿ ಗಣಿಗ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಮಾಧ್ಯಮ ವರದಿಯನ್ನು ತನ್ನ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಬಿಜೆಪಿ ವಿರುದ್ಧ ತೀವ್ರ ದಾಳಿ ನಡೆಸಿದ್ದಾರೆ.
ನಾಯಕ ಅಥವಾ ಯಾವುದೇ ಅಜೆಂಡಾ ಹೊಂದಿರದ ಪಕ್ಷವು ಜನಾದೇಶವನ್ನು ರದ್ದುಗೊಳಿಸುವ ತನ್ನ ಹಳೆಯ ಚಾಳಿಗೆ ಮರಳುತ್ತಿದೆ ಎಂದು ಹೇಳಿರುವ ವೇಣುಗೋಪಾಲ,ಕರ್ನಾಟಕ ಬಿಜೆಪಿಯು ದಿಲ್ಲಿಯಲ್ಲಿರುವ ತನ್ನ ಯಜಮಾನರ ಮೇಲ್ವಿಚಾರಣೆಯಡಿ ಕರ್ನಾಟಕ ಸರಕಾರವನ್ನು ಅಸ್ಥಿರಗೊಳಿಸಲು ಇನ್ನೊಂದು ನಗೆಪಾಟಲಿನ ಪ್ರಯತ್ನವನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
‘ಆದರೆ ನಮ್ಮ ಕಾಂಗ್ರೆಸ್ ಶಾಸಕರು ಅತ್ಯಂತ ನಿಷ್ಠಾವಂತರಾಗಿದ್ದಾರೆ ಮತ್ತು ಸರಕಾರವು ಗ್ಯಾರಂಟಿಗಳ ತ್ವರಿತ ಈಡೇರಿಕೆಗಾಗಿ ವ್ಯಾಪಕ ಪ್ರಶಂಸೆಯನ್ನು ಪಡೆಯುತ್ತಿದೆ. ಅವರು (ಬಿಜೆಪಿ) ಮೊದಲು ಪ್ರತಿಪಕ್ಷ ನಾಯಕನನ್ನು ಮತ್ತು ಪಕ್ಷದ ರಾಜ್ಯಾಧ್ಯಕ್ಷರನ್ನು ಮೊದಲು ಹುಡುಕಿಕೊಳ್ಳಬೇಕಿದೆ ಎಂದಿದ್ದಾರೆ.